ಚೆನ್ನೈ: ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದ ಕಾರಣಕ್ಕೆ ಆತನ ತಾಯಿಯನ್ನು ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ಈ ವಿಲಕ್ಷಣ ಹಾಗೂ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ವಗೈಕುಲಮ್ ನಲ್ಲಿ ನಡೆದಿದ್ದು, ಥಳಿತಕ್ಕೊಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೀನಾಕ್ಷಿ(45) ಎಂಬ ಮಹಿಳೆಯೇ ಥಳಿತಕ್ಕೆ ಒಳಗಾದವರು ಎನ್ನಲಾಗಿದ್ದು, ಇವರ ಮಗ ಅನ್ಯ ಜಾತಿಯ ಯುವತಿಯೊಂದಿಗೆ ಪರಾರಿಯಾಗಿದ್ದ. ಹೀಗಾಗಿ ಯುವತಿಯ ಕಡೆಯವರು, ತಾಯಿಯನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಜನರ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದೆಡೆ ಯುವಕ ಹಾಗೂ ಯುವತಿ ಮದುವೆಯಾಗಿ ಪೊಲೀಸರ ರಕ್ಷಣೆ ಕೋರಿದ್ದಾರೆ.
ಇತ್ತ ಮಗ ಮಾಡಿದ ಕಾರ್ಯಕ್ಕೆ ತಾಯಿ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿದ್ದಾರೆ. ಅಲ್ಲದೇ, ಈ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.