ಮೂರು ವರ್ಷದ ಬಾಲಕಿಯೊಬ್ಬಳು ಅಂತ್ಯಕ್ರಿಯೆಯಲ್ಲಿ ಎಚ್ಚರಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಆಗಸ್ಟ್ 17 ರಂದು ಮಗು ಸತ್ತಿದೆ ಎಂದು ವೈದ್ಯರು ತಪ್ಪಾಗಿ ಘೋಷಿಸಿದ್ದರು. ಮಗುವಿಗೆ ಜೀವವಿದೆ ಅನ್ನೋದು ಪೋಷಕರಿಗೂ ಗೊತ್ತಾಗಿರಲಿಲ್ಲ. ಬಾಲಕಿಯ ತಾಯಿ ಕ್ಯಾಮಿಲಾ ರೊಕ್ಸಾನಾ ಮಾರ್ಟಿನೆಜ್ ಮೆಂಡೋಜಾ, ಸ್ಥಳೀಯ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.
ವಿಲ್ಲಾ ಡಿ ರಾಮೋಸ್‌ನಲ್ಲಿ ಪೋಷಕರೊಂದಿಗೆ ತಂಗಿದ್ದ ಬಾಲಕಿಗೆ ಹೊಟ್ಟೆ ನೋವು, ವಾಂತಿ ಮತ್ತು ಜ್ವರ ಶುರುವಾಗಿತ್ತು. ಕೂಡಲೇ ಹೆತ್ತವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬೇರೆ ದೊಡ್ಡಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ ಸ್ಥಳೀಯ ವೈದ್ಯರು, ಮಗುವನ್ನು ಡಿಸ್ಚಾರ್ಜ್ ಮಾಡುವಾಗ ಪ್ಯಾರಾಸಿಟಮಾಲ್ ಔಷಧದ ಪ್ರಿಸ್ಕ್ರಿಪ್ಷನ್ ಸಹ ಬರೆದುಕೊಟ್ಟಿದ್ದಾರೆ.
ಕೂಡಲೇ ತಾಯಿ ಮಗುವನ್ನು ಬೇರೆ ವೈದ್ಯರ ಬಳಿ ಕರೆದೊಯ್ದಿದ್ದಾಳೆ. ಆತ ಬೇರೆ ಔಷಧಗಳನ್ನು ಬರೆದುಕೊಟ್ಟಿದ್ದಲ್ಲದೆ ಮಗುವಿಗೆ ಹಣ್ಣು ಮತ್ತು ನೀರು ಕೊಡುವಂತೆ ಸೂಚಿಸಿದ್ದಾರೆ. ಆದ್ರೆ ಮಗುವಿನ ದೇಹಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಲೇ ಇತ್ತು.
ಕೂಡಲೇ ಆಕೆಯನ್ನು ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲಾಯ್ತು. ಆದ್ರೆ ಮಗುವಿಗೆ ಆಕ್ಸಿಜನ್ ನೀಡಲು ವೈದ್ಯರು ವಿಳಂಬ ಮಾಡಿದ್ದಾರೆ. ಆಕ್ಸಿಜನ್ ಕೊಟ್ಟು 10 ನಿಮಿಷಗಳ ನಂತರ ಅದನ್ನೆಲ್ಲ ತೆಗೆದ ಆಸ್ಪತ್ರೆ ಸಿಬ್ಬಂದಿ ಮಗು ಮೃತಪಟ್ಟಿದೆಯೆಂದು ಘೋಷಿಸಿದ್ದಾರೆ. ಡಿಹೈಡ್ರೇಶನ್‌ನಿಂದ ಮಗು ಸಾವನ್ನಪ್ಪಿದೆ ಅಂತಾ ಹೇಳಿದ್ದಾರೆ.
ಮರುದಿನ ಬಾಲಕಿ ಕ್ಯಾಮಿಲಾಳ ಅಂತ್ಯಸಂಸ್ಕಾರಕ್ಕೆ ಏರ್ಪಾಡು ಮಾಡಲಾಗಿತ್ತು. ಶವಪೆಟ್ಟಿಗೆಯೊಳಗೆ ಮಂಜು ಮುಸುಕಿದಂತಾಗಿದ್ದನ್ನು ತಾಯಿ ಗಮನಿಸಿದ್ದಾಳೆ. ಮಗು ಆಗಾಗ ಕಣ್ಣು ಪಿಳುಕಿಸುತ್ತಿರುವುದು ಅಜ್ಜಿಯ ಗಮನಕ್ಕೂ ಬಂದಿದೆ. ಬಾಲಕಿಯಲ್ಲಿ ಆಗಲೂ ಹೃದಯಬಡಿತವಿತ್ತು. ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಆಕೆಯನ್ನು ಬದುಕಿಸಲು ಸಾಧ್ಯವಾಗಲೇ ಇಲ್ಲ.