
ವೈದ್ಯರನ್ನ ದೇವರಿಗೆ ಹೋಲಿಸಲಾಗುತ್ತೆ. ಸಾಯುತ್ತಿರುವ ವ್ಯಕ್ತಿಯನ್ನ ಬದುಕಿಸುವ ಶಕ್ತಿ ಅವರಿಗೆ ಇರುತ್ತೆ ಅನ್ನೊ ನಂಬಿಕೆ. ಅವರ ಕೈಗುಣ, ಅವರು ಕೊಡುವ ಔಷಧಿಗಳು ರೋಗದಿಂದ ಮುಕ್ತ ಮಾಡಿಬಿಡುತ್ತೆ, ನಿಜ. ಆದರೆ ಇತ್ತಿಚೆಗೆ ವೈದ್ಯೆಯೊಬ್ಬರು ಮಗುವನ್ನ ಬದುಕಿಸಿದ ಪರಿ ನೋಡ್ತಿದ್ರೆ ಎಂಥವರು ಕೂಡಾ ಆಶ್ಚರ್ಯಚಕಿತರಾಗಿ ಬಿಡುತ್ತಾರೆ.
ಅಸಲಿಗೆ ಈ ಘಟನೆ ನಡೆದಿದ್ದು ಮಾರ್ಚ್ನಲ್ಲಿ, ಆಗ್ರಾದ ಆರೋಗ್ಯ ಕೇಂದ್ರವೊಂದರಲ್ಲಿ ಹೆಣ್ಣು ಮಗುವೊಂದು ಜನ್ಮಿಸಿದೆ. ಹುಟ್ಟಿದ ನವಜಾತ ಮಗು ಉಸಿರಾಡಿಸುತ್ತಲೇ ಇರಲಿಲ್ಲ, ಬದಲಾಗಿ ಉಸಿರೇ ನಿಲ್ಲಿಸಿದ ಹಾಗಿತ್ತು. ಮಗುವನ್ನ ಪರೀಕ್ಷಿಸಲಾಗಿದೆ, ಆಕ್ಸಿಜನ್ ಕೂಡಾ ಕೊಡಲಾಗಿದೆ. ಆದರೂ ಏನೂ ಪ್ರಯೋಜನವಾಗಿರಲಿಲ್ಲ.
ಕೊನೆಗೆ ಅಲ್ಲಿದ್ದ ಡಾಕ್ಟರ್ ಸುಲೇಖಾ ಚೌಧರಿ ಅವರು ಮುಂದೆ ಬಂದು ಮಗುವಿಗೆ ಬಾಯಿಂದ ಬಾಯಿಗೆ ಉಸಿರುಕೊಡಲು ಪ್ರಯತ್ನಿಸಿದ್ದಾರೆ. ಸುಮಾರು 7 ನಿಮಿಷಗಳ ಕಾಲ ಅವರು ಪ್ರಯತ್ನ ಮಾಡಿದ್ದಾರೆ.
ಕೊನೆಗೆ ಹಂತ ಹಂತವಾಗಿ ಮಗುವಿನಲ್ಲಿ ಚಲನೆ ಉಂಟಾಗಿದೆ. ಅಷ್ಟೆ ಅಲ್ಲ, ಮಗು ಮತ್ತೆ ಉಸಿರಾಡುವುದಕ್ಕೆ ಸಾಧ್ಯವಾಗಿದೆ. ಆ ಸಮಯದಲ್ಲಿ ಡಾ. ಸುಲೇಖ ಎಲ್ಲರ ಕಣ್ಣಿಗೆ ದೇವರಂತೆ ಕಾಣಿಸಿದ್ದರು. ಈ ವಿಡಿಯೋವನ್ನು ಯುಪಿಯ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಈಗಾಗಲೇ ಈ ವಿಡಿಯೋವನ್ನ ಸುಮಾರು 1.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ನೆಟ್ಟಿಗರು ಈ ಡಾಕ್ಟರ್ ಮಗುವಿನ ಜೀವ ಉಳಿಸಿದ ರೀತಿಯನ್ನ ಪವಾಡ ಅಂತ ಹೇಳುತ್ತಿದ್ದಾರೆ.