10 ವರ್ಷದ ಮಣಿಪುರದ ಬಾಲಕಿಯೊಬ್ಬಳು ತನ್ನ ಪುಟ್ಟ ಸಹೋದರಿಯನ್ನು ಹಿಡಿದುಕೊಂಡು ತರಗತಿಗೆ ಹಾಜರಾಗಿದ್ದ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದ್ದು ನೆನಪಿದೆಯೇ ?
ಇದೀಗ ಮಣಿಪುರದ ಸಚಿವ ತೊಂಗಮ್ ಬಿಸ್ವಜಿತ್ ಸಿಂಗ್ ಅವರು ಪುಟ್ಟ ಬಾಲಕಿಯ ಬಗ್ಗೆ ಟ್ವಿಟ್ಟರ್‌ನಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಆಕೆ ಈಗ ಬೋರ್ಡಿಂಗ್ ಶಾಲೆಯಲ್ಲಿದ್ದಾಳೆ ಎಂದು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಮೈನಿಂಗ್ಸಿನ್ಲಿಯು ಪಮೇಯ್ ಇಂಫಾಲ್‌ನ ಬೋರ್ಡಿಂಗ್ ಶಾಲೆಯಾದ ಸ್ಲೋಪ್‌ಲ್ಯಾಂಡ್ ಪಬ್ಲಿಕ್ ಸ್ಕೂಲ್‌ಗೆ ಪ್ರವೇಶ ಪಡೆದಿದ್ದಾಳೆ.
ಸಚಿವ ತೊಂಗಮ್ ಬಿಸ್ವಜಿತ್ ಸಿಂಗ್ ಅವರು ತಾವು ಈ ಹಿಂದೆ ಕೊಟ್ಟಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಸಚಿವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ಮಣಿಪುರದ ತಮೆಂಗ್‌ಲಾಂಗ್‌ನ 10 ವರ್ಷದ ಮೈನಿಂಗ್‌ಸಿನ್ಲಿಯು ಪಮೇಯ್ ಸಹೋದರಿಯನ್ನು ತನ್ನೊಂದಿಗೆ ಶಾಲೆಗೆ ಕರೆದೊಯ್ದಿದ್ದಳು. ಆಕೆಯ ಪೋಷಕರು ಕೃಷಿ ಮಾಡುತ್ತಿದ್ದುದರಿಂದ ಹೊರಗೆ ಇರಬೇಕಾಗಿತ್ತು. ಇದರಿಂದ ಪುಟ್ಟ ಕಂದಮ್ಮನನ್ನು ನೋಡಿಕೊಳ್ಳಲು ಯಾರು ಇಲ್ಲದರಿಂದ ಶಾಲೆಗೆ ಹೋಗುವಾಗ ಈ ಬಾಲಕಿ ತನ್ನ ಸೋದರಿಯನ್ನು ಜೊತೆಯಲ್ಲೇ ಕರೆಯೊಯ್ಯುತ್ತಿದ್ದಳು. ತರಗತಿಯಲ್ಲಿ ಕಂದಮ್ಮನನ್ನು ತನ್ನ ತೋಳಿನಲ್ಲಿ ಮಲಗಿಸಿ ಆಕೆ ಹಾಜರಾಗುತ್ತಿದ್ದಳು.
ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಚಿವ ಬಿಸ್ವಜಿತ್ ತೊಂಗಮ್ ಅವರು ಪುಟ್ಟ ಬಾಲಕಿ ತೋರಿದ ಸಮರ್ಪಣೆಗೆ ಭಾವುಕರಾಗಿದ್ರು. ಅವರು ಬಾಲಕಿಯನ್ನು ಮತ್ತು ಆಕೆಯ ಕುಟುಂಬವನ್ನು ಭೇಟಿ ಮಾಡಿ, ಆಕೆಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡುವ ಭರವಸೆ ನೀಡಿದ್ದರು. ಇದೀಗ ತಾವು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದಾರೆ.