ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಎಷ್ಟು ಮುಖ್ಯವೋ ಅದನ್ನು ನೀಡುವ ರೀತಿಯೂ ಅಷ್ಟೇ ಮುಖ್ಯವಾಗುತ್ತದೆ. ಎದೆ ಹಾಲು ನೀಡುವ ಭಂಗಿ ಹೇಗಿರಬೇಕು ಎಂಬುದನ್ನು ನೋಡೋಣ.
ಮಗುವಿನ ದೇಹ ನೇರವಿರಲಿ. ಮಗುವಿನ ಕತ್ತು ಮತ್ತು ಭುಜದ ಭಾಗವನ್ನು ಮಾತ್ರ ಮೇಲೆತ್ತಿ ಹಾಲು ಕುಡಿಸಲು ಪ್ರಯತ್ನಿಸದಿರಿ. ಇಡೀ ಮಗುವಿನ ದೇಹವನ್ನು ಆಧರಿಸಿ ಹಿಡಿಯುವುದು ಬಹಳ ಮುಖ್ಯ. ಆಗ ಹಾಲುಣಿಸುವುದು ಸುಲಭವಾಗುತ್ತದೆ.
ರಾತ್ರಿ ಮಲಗುವ ಮುನ್ನ ಮಗುವಿಗೆ ಪೂರ್ತಿ ಹೊಟ್ಟೆ ತುಂಬಿಸಿ. ಅರ್ಧ ಹೊಟ್ಟೆ ತುಂಬಿ ಮಲಗಿದ ಮಗು ಕೆಲವೇ ಕ್ಷಣಗಳಲ್ಲಿ ಎದ್ದು ಅಮ್ಮನ ನಿದ್ರೆಯನ್ನೂ ಹಾಳು ಮಾಡಿಬಿಡುತ್ತದೆ. ಮಕ್ಕಳಿಗೆ ರಾತ್ರಿ – ಹಗಲಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೂ ಎರಡು ಗಂಟೆಗೊಮ್ಮೆ ಮಗುವಿಗೆ ತಪ್ಪದೆ ಹಾಲೂಡಿಸಿ. ಮಗು ತುಸು ಬೆಳೆಯುವ ತನಕ ಹಗಲು ನಿದ್ರೆ ಮಾಡಿ, ರಾತ್ರಿಯನ್ನು ಮಗುವಿಗಾಗಿ ಮೀಸಲಿಡಿ.
ಎದೆಹಾಲು ಕಡಿಮೆಯಾದರೆ ಮಗುವಿಗೆ ಸಾಕಷ್ಟು ಹಾಲು ಸಿಗದೆ ಅದು ದಿನವಿಡಿ ಅಳುತ್ತಿರಬಹುದು. ತಾಯಿಗೂ ಎದೆನೋವು ಬಂದೀತು. ಅದನ್ನು ತಪ್ಪಿಸಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಹಣ್ಣುಗಳ ಜ್ಯೂಸ್ ಕುಡಿಯಿರಿ. ನೀರಿನಂಶ ಹೇರಳವಾಗಿರುವ ಹಣ್ಣು ತಿನ್ನಿ. ಸಬ್ಬಸ್ಸಿಗೆ ಸೊಪ್ಪು ಸೇವಿಸಿ. ಮೆಂತೆ, ಸೋಂಪಿನ ಸೇವನೆ, ಕ್ಯಾರೆಟ್ ಜ್ಯೂಸ್ ಕುಡಿಯಿರಿ.