ಮಗುವಿಗೆ 7 ನೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ರಾಗಿ ಸೆರಿ, ತರಕಾರಿ ರಸ ನೀಡಲು ಪ್ರಾರಂಭಿಸಲಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ಬರೀ ಹಾಲು ಸಾಕಾಗುವುದಿಲ್ಲ. ಮಗುವಿಗೆ ಅದರ ಬೆಳವಣಿಗೆಗೆ ಪೂರಕವಾದ ಆಹಾರವನ್ನು ಮನೆಯಲ್ಲೇ ತಯಾರಿಸಿ ನೀಡುವುದು ಆರೋಗ್ಯಕರ.
ಮಕ್ಕಳಿಗೆ ಕೊಡುವ ಪೌಷ್ಠಿಕ ಆಹಾರಗಳಲ್ಲೊಂದು ಮೊಟ್ಟೆ. ಆದರೆ ಮೊಟ್ಟೆ ಯಾವಾಗ ಕೊಡಬೇಕೆಂಬ ಗೊಂದಲ ಅನೇಕರಲ್ಲಿದೆ. ಮೊಟ್ಟೆ ಕೊಟ್ಟರೆ ಜೀರ್ಣವಾಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆ ಹಲವರಲ್ಲಿದೆ. ಇಲ್ಲಿದೆ ಅದಕ್ಕೆ ಉತ್ತರ.
* ಕೆಲವು ಮಕ್ಕಳಿಗೆ ಮೊಟ್ಟೆ, ಹಾಲಿನ ಉತ್ಪನ್ನಗಳು, ಸೋಯಾ, ನೆಲಗಡಲೆ, ಮೀನು ಅಲರ್ಜಿ ಉಂಟು ಮಾಡುತ್ತವೆ. ಹೀಗಾಗಿ ಮಗುವಿಗೆ ಹೊಸ ಆಹಾರ ಕೊಡುವಾಗ ಸ್ವಲ್ಪ ಕೊಡುವುದು ಒಳ್ಳೆಯದು. ಆ ಆಹಾರ ಸೇವನೆಯಿಂದ ಮಗುವಿಗೆ ಯಾವುದೇ ಸಮಸ್ಯೆ ಕಂಡು ಬರದಿದ್ದರೆ ಅಂಥ ಆಹಾರವನ್ನು ಕೊಡಲು ಪ್ರಾರಂಭಿಸಬಹುದು.
* ಮೊಟ್ಟೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು, ಅದರ ಅರಿಶಿಣ ತೆಗೆಯಿರಿ. ಮೊಟ್ಟೆಯ ಹಳದಿಯನ್ನು ಎದೆ ಹಾಲು ಅಥವಾ ಫಾರ್ಮುಲಾ ಹಾಲಿನ ಜೊತೆ ಮಿಕ್ಸ್ ಮಾಡಿ ಕೊಡಿ. ಮಗುವಿಗೆ ಒಂದು ವರ್ಷ ತುಂಬಿದ್ದರೆ ಹಸುವಿನ ಹಾಲಿನ ಜೊತೆ ಮಿಕ್ಸ್ ಮಾಡಿ ಕೊಡಬಹುದು.
* ಮಗು ಸ್ವಲ್ಪ ಅಧಿಕ ಆಹಾರ ತೆಗೆದುಕೊಳ್ಳಲಾರಂಭಿಸಿದ ಮೇಲೆ ಮೊಟ್ಟೆಯ ಹಳದಿಯನ್ನು ಬೆಣ್ಣೆಹಣ್ಣು, ಸಿಹಿ ಗೆಣಸು, ಬಾಳೆಹಣ್ಣು ಜೊತೆ ಮಿಕ್ಸ್ ಮಾಡಿ ಕೊಡಬಹುದು.
* ಮೊಟ್ಟೆಯನ್ನು ಬೇಯಸಿ ಅದರ ಅರಿಶಿಣವನ್ನು ಮಗು ಈಗಾಗಲೇ ತಿನ್ನುತ್ತಿರುವ ತರಕಾರಿ ಜೊತೆಯೂ ಮಿಕ್ಸ್ ಮಾಡಿ ಕೊಡಬಹುದು.