ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ ಒಳ್ಳೆಯದು.
ಮಕ್ಕಳಿಗೆ ಹಲ್ಲು ಮೂಡದೇ ಇರುವುದರಿಂದ ಜಗಿದು ತಿನ್ನುವುದಕ್ಕೆ ಆಗುವುದಿಲ್ಲ. ಸುಲಭದಲ್ಲಿ ಜೀರ್ಣವಾಗುವ ಆಹಾರಗಳನ್ನು ಕೊಡುವುದರಿಂದ ಅವರ ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಕ್ಯಾರೆಟ್, ಆಲೂಗಡ್ಡೆ ಬಳಸಿ ಮಾಡುವ ಪ್ಯೂರಿ ಇದೆ. ಒಮ್ಮೆ ಮಾಡಿ ತಿನ್ನಿಸಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್-1, ಆಲೂಗಡ್ಡೆ-1/2, ಜೀರಿಗೆ-1/4 ಟೀ ಸ್ಪೂನ್, ಇಂಗು-ಸ್ವಲ್ಪ.
ಮಾಡುವ ವಿಧಾನ:
ಕ್ಯಾರೆಟ್ ಹಾಗೂ ಆಲೂಗಡ್ಡೆ ಎರಡನ್ನೂ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ನಂತರ ಇದನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಒಂದು ಅಗಲವಾದ ಬೌಲ್ ಗೆ ಹಾಕಿಕೊಳ್ಳಿ. ಅದಕ್ಕೆ ಜೀರಿಗೆ, ಇಂಗು ಸೇರಿಸಿ ತರಕಾರಿ ಹೋಳುಗಳು ಮುಳುಗುವಷ್ಟು ನೀರು ಸೇರಿಸಿ ಒಂದು ಮುಚ್ಚಳ ಮುಚ್ಚಿ.
ನಂತರ ಕುಕ್ಕರ್ ತಳಕ್ಕೆ ಸ್ವಲ್ಪ ನೀರು ಸೇರಿಸಿಕೊಂಡು ತರಕಾರಿಗಳಿರುವ ಬೌಲ್ ಅನ್ನು ಕುಕ್ಕರ್ ನಲ್ಲಿಟ್ಟು 3 ವಿಷಲ್ ಕೂಗಿಸಿಕೊಳ್ಳಿ. ಬಳಿಕ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನುಣ್ಣಗೆ ರುಬ್ಬಿ ಮಗುವಿಗೆ ತಿನ್ನಿಸಿ.