ಸಾಮಾನ್ಯವಾಗಿ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳಿಗೆ ಇನ್ವಿಟೇಶನ್ ಕಾರ್ಡ್ ನೀಡುವ ಮೂಲಕ ಆಹ್ವಾನಿಸುವುದು ವಾಡಿಕೆ. ಇನ್ವಿಟೇಶನ್ ಕಾರ್ಡ್ ಇಲ್ಲದಿದ್ದರೆ ಈಗಿನ ತಾಂತ್ರಿಕ ಯುಗದಲ್ಲಿ ವಾಟ್ಸಾಪ್ ಮೊರೆ ಹೋಗುತ್ತಾರೆ.
ಆದರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೀರಭದ್ರಪ್ಪ ಮಾತ್ರ ತಮ್ಮ ಮಗಳ ಹುಟ್ಟುಹಬ್ಬಕ್ಕೆ ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು, ಅಧ್ಯಾಪಕತೇರ ನೌಕರರು, ಅತಿಥಿ ಉಪನ್ಯಾಸಕರು ಹಾಗೂ ಏಜೆನ್ಸಿ ನೌಕರರನ್ನು ವಿಭಿನ್ನ ರೀತಿಯಲ್ಲಿ ಆಹ್ವಾನಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ಇದಕ್ಕೆಂದೇ ಅವರು ವಿಶ್ವವಿದ್ಯಾಲಯದ ಲೆಟರ್ ಹೆಡ್ ನಲ್ಲಿ ಸುತ್ತೋಲೆಯನ್ನು ಹೊರಡಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಮಾತ್ರ ಸುತ್ತೋಲೆ ಹೊರಡಿಸುವುದನ್ನು ಬಿಟ್ಟು ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಇದನ್ನು ಉಪಯೋಗಿಸಿರುವ ಕುರಿತು ಈಗ ಪರ – ವಿರೋಧದ ಚರ್ಚೆಗೆ ಕಾರಣವಾಗಿದೆ.