ಬೆಂಗಳೂರು: ಅಧಿಕಾರಿಗಳು ನಮ್ಮ ವಿರುದ್ಧ ಮಾತ್ರ ಕೇಸ್ ದಾಖಲಿಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಯಾವುದೇ ಕೇಸ್ ಹಾಕುತ್ತಿಲ್ಲ. ನಮಗೂ ಒಂದು ಕಾಲ ಬರುತ್ತೆ ನಾವು ಕೂಡ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುವ ಸಂದರ್ಭ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ವಿರುದ್ಧ ಯಾವ ಯಾವ ಪ್ರಯೋಗ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ನನ್ನ ಮಗಳು ನಡೆಸುತ್ತಿರುವ ಶಾಲೆಯ ಮೇಲೂ ಕೇಸ್ ಹಾಕಿದ್ದಾರೆ. ಯಾವುದೋ ಹಳೆ ಹಳೆ ಕೇಸ್ ಗಳನ್ನು ಓಪನ್ ಮಾಡುತ್ತಿದ್ದಾರೆ. ಏನೇನು ತೊಂದರೆ ಕೊಡಬೇಕು ಅದೆಲ್ಲವನ್ನೂ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಐಟಿ, ಇಡಿ ದಾಖಲೆ ಸಮೇತ ಮಾತನಾಡುತ್ತೇನೆ. ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದು ಗುಡುಗಿದ್ದಾರೆ.
ನಮ್ಮ ವಿರುದ್ಧ ಮಾತ್ರ ಕೇಸ್ ಹಾಕುತ್ತಿರುವ ಅಧಿಕಾರಿಗಳು ಬಿಜೆಪಿ ನಾಯಕರ ವಿರುದ್ಧ ಹಾಕುತ್ತಿಲ್ಲ. ಈ ಬಗ್ಗೆಯೂ ಕೋರ್ಟ್ ನಲ್ಲಿ ಹೋರಾಡುತ್ತೇವೆ. ಸರ್ಕಾರ ಈಗಲೇ ಎಚ್ಚೆತ್ತು ಎಲ್ಲರನ್ನು ಸಮಾನವಾಗಿ ನೋಡದೇ ಹೋದರೆ ಸರಿಯಿರಲ್ಲ. ಮುಂದೆ ನಮಗೂ ಕಾಲ ಬರುತ್ತೆ. ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಬೇಕಾಗುತ್ತೆ ಎಂದು ವಾರ್ನಿಂಗ್ ನೀಡಿದ್ದಾರೆ.
ಇದೇ ವೇಳೆ ಮೇಕೆದಾಟು ಯೋಜನೆಯಿಂದ ಪರಿಸರ ನಾಶವಾಗಲಿದೆ. ಯೋಜನೆಗೆ ನಮ್ಮ ವಿರೋಧವಿದೆ ಎಂದು ಹೇಳಿರುವ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಅವರು ಅವರದ್ದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾವು ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅವರ ಅಭಿಪ್ರಾಯ ಅವರಿಗೆ. ಯೋಜನೆಯಿಂದಾಗಿ ಹಲವರು ಜಮೀನು ಕಳೆದುಕೊಳ್ಳುತ್ತಾರೆ. ನನ್ನ ಕ್ಷೇತ್ರದ ಜನ ಭೂಮಿ ಕಳೆದುಕೊಳ್ಳುತ್ತಾರೆ, ಅದೆಷ್ಟು ನಷ್ಟ ಅನುಭವಿಸುತ್ತಾರೆ. ಆದರೂ ನಾವು ಕುಡಿಯುವ ನೀರು ಬೇಕು ಎಂಬ ಕಾರಣಕ್ಕೆ ಉಸಿರುಕಟ್ಟಿಕೊಂಡು ಸುಮ್ಮನಿದ್ದೇವೆ. ಕ್ಷೇತ್ರದ ಜನರಿಗೆ ಆ ನಂತರದಲ್ಲಿ ಹಣ ಕೊಡಿಸಲು ಪ್ರಯತ್ನ ಮಾಡುತ್ತೇವೆ ಎಂದರು.