ಮಗಳು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರೂ ಆಕೆಗೆ ಜೀವನಾಂಶ ಕೊಡುವುದನ್ನು ಮುಂದುವರಿಸಬೇಕೆಂದು ತಂದೆಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಆಧಾರದ ಮೇಲೆ ತನ್ನ ಮಗಳು ಉತ್ತಮವಾಗಿ ಸಂಭಾವನೆ ಪಡೆಯುತ್ತಿದ್ದಾಳೆ ಎಂಬ ವ್ಯಕ್ತಿಯ ಹೇಳಿಕೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಏನಿದು ಪ್ರಕರಣ ?
ವೈವಾಹಿಕ ಭಿನ್ನಾಭಿಪ್ರಾಯದ ಕಾರಣದಿಂದ ಪತಿ-ಪತ್ನಿ ಬೇರೆಯಾಗಿದ್ದು, ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 25,000 ರೂಪಾಯಿ ಕೊಡಬೇಕೆಂದು 2018ರ ಸೆಪ್ಟೆಂಬರ್ 1 ರಂದೇ ಕೋರ್ಟ್ ಆದೇಶಿಸಿತ್ತು. ಆದ್ರೆ ತಂದೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ. ಮಗಳು ಈಗ ಪ್ರಬುದ್ಧಳಾಗಿದ್ದಾಳೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೈತುಂಬಾ ಹಣ ಮಾಡುತ್ತಿದ್ದಾಳೆ ಎಂದು ವಾದಿಸಿದ್ದ ತಂದೆ, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಮಗಳು ಪೋಸ್ಟ್ ಮಾಡಿದ್ದ ಫೋಟೋಗಳನ್ನೆಲ್ಲ ಕೋರ್ಟ್ ಎದುರು ಹಾಜರುಪಡಿಸಿದ್ದ.
ತಾನು 72-80 ಲಕ್ಷ ರೂಪಾಯಿ ದುಡಿಯುತ್ತಿರುವುದಾಗಿ ಯುವತಿ ಅದರಲ್ಲಿ ಬರೆದುಕೊಂಡಿದ್ದಳು. ಆಕೆಯನ್ನೂ ಕರೆಸಿ ನ್ಯಾಯಾಲಯ ಹೇಳಿಕೆ ಪಡೆದಿತ್ತು. ತಂದೆಯ ಅರ್ಜಿ ವಿಚಾರಣೆ ಮಾಡಿದ ಕೋರ್ಟ್, ಮಗಳು ಮೇಜರ್ ಆಗಿದ್ದರೂ ಸಹ ಮದುವೆಯಾಗುವವರೆಗೂ ತನ್ನ ತಂದೆಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಹೇಳಿದೆ. ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಮಾಧ್ಯಮದಲ್ಲಿ ಆಕೆ ಪೋಸ್ಟ್ ಮಾಡಿದ ಫೋಟೋಗಳ ಮುದ್ರಿತ ಪ್ರತಿಗಳಂತಹ ದಾಖಲೆಗಳ ಸಾಕ್ಷ್ಯವನ್ನು ನ್ಯಾಯಾಲಯವು ಪರಿಶೀಲಿಸಿದೆ.
“ಇಂದು ಯುವಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೊಳಪುಳ್ಳ ಚಿತ್ರವನ್ನು ತೋರಿಸುತ್ತಾರೆ, ಆದರೆ ಅಸಲಿಯತ್ತು ಬೇರೆಯೇ ಆಗಿರುತ್ತದೆ. ಅದರಲ್ಲಿನ ವಿಷಯಗಳು ಯಾವಾಗಲೂ ನಿಜವಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ” ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಮಗಳ ಗಳಿಕೆ 72 ಲಕ್ಷದಿಂದ 80 ಲಕ್ಷ ರೂಪಾಯಿ ಎಂಬ ತಂದೆಯ ವಾದವು ಕೇವಲ ಆಕೆಯ ಇನ್ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಆಧರಿಸಿದೆ. ಅದಕ್ಕೆ ಬೇರೆ ಯಾವುದೇ ಸ್ವತಂತ್ರ ಸಾಕ್ಷ್ಯಾಧಾರಗಳಿಲ್ಲದ ಕಾರಣ ಕೌಟುಂಬಿಕ ನ್ಯಾಯಾಲಯ ಅದನ್ನು ಪರಿಗಣಿಸಿಲ್ಲ ಎಂದು ನ್ಯಾಯಮೂರ್ತಿ ಡಾಂಗ್ರೆ ಹೇಳಿದ್ದಾರೆ. ತಂದೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.