
ಬಿಹಾರದಲ್ಲಿ ಮಾನವ ಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಪುತ್ರನ ಶವ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪೋಷಕರ ಬಳಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಕಡು ಬಡತನದಲ್ಲಿರುವ ಈ ಕುಟುಂಬ ಹಣ ಸಂಗ್ರಹಿಸಲು ಭಿಕ್ಷಾಟನೆ ಮಾಡಿದ್ದು, ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ವಿವರ: ಸಮಷ್ಟಿಪುರ ಜಿಲ್ಲೆಯ ಅಹರ್ ಗ್ರಾಮದ ಮಹೇಶ್ ಠಾಕೂರ್ ಎಂಬವರ ಬುದ್ದಿಮಾಂದ್ಯ ಪುತ್ರ ಸಂಜೀವ್ ಠಾಕೂರ್ ಮೇ 25 ರಂದು ನಾಪತ್ತೆಯಾಗಿದ್ದ. ಜೂನ್ 6 ರಂದು Musrigharari ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಶವ ಪತ್ತೆಯಾಗಿತ್ತು. ಬಳಿಕ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸಮಷ್ಟಿಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು.
ಮಗನ ಶವ ಗುರುತಿಸಿದ್ದ ಪೋಷಕರು ಶವ ಪಡೆಯಲು ಆಗಮಿಸಿದ ವೇಳೆ ಆಸ್ಪತ್ರೆ ಸಿಬ್ಬಂದಿ ನಾಗೇಂದ್ರ ಮಲ್ಲಿಕ್ ಎಂಬಾತ 50 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಆದರೆ ಅಷ್ಟು ಹಣ ಹೊಂದಿಸಲಾಗದ ಈ ಬಡ ಕುಟುಂಬ ಭಿಕ್ಷೆ ಬೇಡಲು ಮುಂದಾಗಿದೆ. ಇದರ ಫೋಟೋವನ್ನು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಶೇರ್ ಮಾಡಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತವನ್ನು ಲೇವಡಿ ಮಾಡಿದ್ದಾರೆ.