ಇದು ತಾನು ಅವನಲ್ಲ….. ಅವಳು ಕಥೆ. ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂನ ಕೊಳಂಚಿ ಮತ್ತು ಅಮುತಾ ದಂಪತಿ 21 ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಬೆಳೆಯುತ್ತಾ ತನ್ನಲ್ಲಾಗುತ್ತಿದ್ದ ಬದಲಾವಣೆಯನ್ನು ಪೋಷಕರ ಬಳಿ ತಿಳಿಸಿದಾಗ ಅವರು ನಿಶಾಂತ್ ನನ್ನು ವಿರೋಧಿಸಿ ಮನೆಯಿಂದ ಹೊರಹಾಕಿದ್ದರು.
ಅವರಿವರ ಆಶ್ರಯದಲ್ಲಿ ಬದುಕು ಮುನ್ನಡೆಸಿದ ನಿಶಾಳನ್ನು (ನಿಶಾಂತ್) ಇತ್ತೀಚೆಗೆ ತಮ್ಮ ಮನಸ್ಸು ಬದಲಾಯಿಸಿ ಪೋಷಕರು ಒಪ್ಪಿಕೊಂಡಿದ್ದಾರೆ. ಇದೀಗ ನಿಶಾಳಿಗೆ 21 ವರ್ಷ ವಯಸ್ಸಾಗಿದ್ದು, ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿ ಮಾಡುವ ಕಾರ್ಯಕ್ರಮವನ್ನು ಈಕೆಯ ಪೋಷಕರು ನೆರವೇರಿಸಿದ್ದಾರೆ.
ನಿಶಾಂತ್ ನಾಗಿ ಜನಿಸಿದ ನಿಶಾ, ಕೊಲಂಚಿ ಸೇಲ್ಸ್ ಹಾಲ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಅಮುತಾ ನೈರ್ಮಲ್ಯ ಕಾರ್ಯಕರ್ತೆಯಾಗಿದ್ದಾರೆ. ಕ್ಯಾಟರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರುವ ನಿಶಾ, ಕೆಲ ವರ್ಷಗಳ ಹಿಂದೆ ಪೋಷಕರು ಆಕೆಯನ್ನು ಖಂಡಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದರು. ಇದೀಗ ಆಕೆಯ ಹೆಸರನ್ನು ಬದಲಾಯಿಸಿದ್ದಲ್ಲದೆ, ನಿಶಾಳಿಗೆ ಪ್ರೌಢಾವಸ್ಥೆಯ ಸಮಾರಂಭವನ್ನು ಸಹ ನಡೆಸಿದ್ದಾರೆ.
ನಿಶಾಂತ್ ನನ್ನು ನಿಶಾ ಎಂದು ಗುರುತಿಸುವ ಸಮಾರಂಭದಲ್ಲಿ ಸಂಬಂಧಿಕರು ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿಶಾಳೊಂದಿಗೆ ಓದಿದ ಆಕೆಯ ಸ್ನೇಹಿತರು, ಕುಟುಂಬದವರು, ಸಂಬಂಧಿಕರು, ನೆರೆಹೊರೆಯವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ನಿಶಾ, ತನ್ನಲಾದ ಬದಲಾವಣೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಗೌರವಿಸುವ ಇಂತಹ ಪೋಷಕರು ಮತ್ತು ಸಂಬಂಧಿಕರು ಸಿಕ್ಕಿದ್ದು ತನ್ನ ಪುಣ್ಯ. ಎಲ್ಲಾ ಪಾಲಕರು ತಮ್ಮ ಮಕ್ಕಳ ಆಸೆಯನ್ನು ಸಮಾನವಾಗಿ ಗೌರವಿಸಬೇಕೆಂದು ವಿನಂತಿಸಿದ್ದಾರೆ.
ಇದೇ ಪ್ರಪ್ರಥಮ ಬಾರಿಗೆ ತೃತೀಯ ಲಿಂಗಿಯೊಬ್ಬರಿಗೆ ಸಮಾರಂಭದ ಮೂಲಕ ಮನ್ನಣೆ ನೀಡಿರುವುದು ಖಂಡಿತಾ ಸಮುದಾಯದಲ್ಲಿ ಬದಲಾವಣೆ ತರಲಿದೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ತೃತೀಯಲಿಂಗಿಗಳನ್ನು ಸ್ವೀಕರಿಸಿ ಈ ರೀತಿ ಗೌರವಿಸುವ ಪೋಷಕರು ಇರುವುದು ತೀರಾ ಅಪರೂಪವಾಗಿದೆ.