ಮಕ್ಕಳ ಮೇಲೆ ದೌರ್ಜನ್ಯವೆಸಗಿರುವುದಾಗಿ ಮುಖ್ಯ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆಗೆ ಸುಳ್ಳು ದೂರು ನೀಡಿದ್ದ ಆರೋಪಿ ವಿರುದ್ಧವೇ ಪೊಲೀಸರು ಈಗ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕರು, ಏಳು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿತ್ತು. ಈ ಸಂಬಂಧ ವಿಚಾರಣೆಗಾಗಿ ಬುಧವಾರದಂದು ಡಿಡಿಪಿಐ ಶಾಲೆಗೆ ಬಂದಿದ್ದರು.
ಈ ವೇಳೆ ಅವರನ್ನು ಕೂಡಿ ಹಾಕಿದ ಗ್ರಾಮಸ್ಥರು ಹಾಗೂ ಎಸ್ ಡಿ ಎಂ ಸಿ ಪದಾಧಿಕಾರಿಗಳು ಸುಳ್ಳು ದೂರು ನೀಡಿರುವ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು. ಆ ಬಳಿಕ ಪೊಲೀಸರ ಸೂಚನೆ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ.