ಪ್ರಕರಣ ಒಂದರ ವಿಚಾರಣೆ ವೇಳೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳು ಸಮಾಜ ವಿರೋಧಿ ಕೃತ್ಯಕ್ಕೆ ಸಮನಾಗಿದ್ದು, ಹೀಗಾಗಿ ಅಪ್ರಾಪ್ತರನ್ನು ರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದೆ.
ಪ್ರಕರಣದ ವಿವರ: ಮೈಸೂರಿನ ಹುಣಸೂರು ನಿವಾಸಿ 27 ವರ್ಷದ ವ್ಯಕ್ತಿ 14 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಜೂನ್ 2013ರಲ್ಲಿ ಧಾರ್ಮಿಕ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲದೆ ವಾಪಾಸ್ ಕರೆತಂದ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ.
ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಅಪಹರಣ ಮತ್ತು ಲೈಂಗಿಕ ದೌರ್ಜನ್ಯದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ ಆರೋಪಿ ಸಂತ್ರಸ್ತೆಯನ್ನು ವಿವಾಹವಾಗಿ ಒಂದು ಮಗು ಇದ್ದರೂ ಸಹ ಶಿಕ್ಷೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಆರೋಪಿಗೆ ಏಳು ವರ್ಷ ಶಿಕ್ಷೆ ಮತ್ತು ಐವತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.