ಬೆಂಗಳೂರು: ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ವರದಿ ನೀಡದೆ ಲೈಂಗಿಕ ದೌರ್ಜನ್ಯ ಪ್ರಮಾಣ ಪತ್ರ ನೀಡಿದ ಸರ್ಕಾರಿ ವೈದ್ಯರ ಕ್ರಮಕ್ಕೆ ಹೈಕೋರ್ಟ್ ಕಿಡಿಕಾರಿದೆ. ಲೈಂಗಿಕ ದೌರ್ಜನ್ಯ ಪ್ರಮಾಣಪತ್ರದ ಅರ್ಥವೇನು ಎಂದು ನ್ಯಾಯಾಲಯದ ಪ್ರಶ್ನೆಗೆ ವೈದ್ಯರು ಉತ್ತರಿಸಲಿಲ್ಲ. ಫೊರೆನ್ಸಿಕ್ ವರದಿ ಬಾಕಿ ಇರುವ ಕಾರಣ ವರದಿ ನೀಡಿಲ್ಲ ಎಂದು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣ ಇದಾಗಿದೆ. ಆರೋಪಿ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ಪೀಠವು ವೈದ್ಯರ ಕ್ರಮದ ವಿರುದ್ಧ ಸಿಡಿಮಿಡಿಗೊಂಡಿದೆ.
ವೈದ್ಯರು ವರದಿ ನೀಡದ ಕಾರಣ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಉದ್ದೇಶವೇ ವಿಫಲವಾಗಿದೆ ಎಂದು ನ್ಯಾಯಾಮೂರ್ತಿ ಹೇಳಿದ್ದಾರೆ. ಯಾವುದೇ ವರದಿ ನೀಡದೆ ಅದು ಹೇಗೆ ಲೈಂಗಿಕ ದೌರ್ಜನ್ಯದ ಪ್ರಮಾಣ ಪತ್ರ ಕೊಡಲಾಗಿದೆ ಎಂದು ನ್ಯಾಯಮೂರ್ತಿಗಳ ಪೀಠ ಪ್ರಶ್ನಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅಪ್ರಾಪ್ತರನ್ನು ತಮ್ಮ ಅಭಿಪ್ರಾಯಕ್ಕಾಗಿ ಹಾಜರುಪಡಿಸಿದಾಗ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸೂಕ್ತ ಸುತ್ತೋಲೆ ಹೊರಡಿಸಲು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ. ಲೈಂಗಿಕ ದೌರ್ಜನ್ಯ ಪ್ರಮಾಣ ಪತ್ರ ನೀಡಿದ ವೈದ್ಯರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.
ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.