ಮಕ್ಕಳ ಮಾನಸಿಕ ಆರೋಗ್ಯ ಅವ್ರ ಏಳಿಗೆ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಮಕ್ಕಳ ಆರೋಗ್ಯ ಸುಧಾರಣೆ ಸಾಮಾನ್ಯ ವಿಷ್ಯವಲ್ಲ. ಅವ್ರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವುದು ಪೋಷಕರ ಜವಾಬ್ದಾರಿ. ನಿಮ್ಮ ಭಾಷೆ, ಬಳಸುವ ಶಬ್ಧದ ಮೂಲಕ ನೀವು ಮಕ್ಕಳ ಮೇಲೆ ಪ್ರೀತಿ ತೋರಬಹುದು.
ಮಕ್ಕಳನ್ನು ಹೊಗಳಲು ಮರೆಯಬೇಡಿ. ಕಾಲ ಕಾಲಕ್ಕೆ ಅವ್ರಿಗೆ ಪ್ರೋತ್ಸಾಹ ನೀಡುವ ಅಗತ್ಯವಿರುತ್ತದೆ. ನೀವು ನೀಡುವ ಪ್ರೋತ್ಸಾಹ ಮಕ್ಕಳ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮಕ್ಕಳಿಗೆ ಸ್ಪಷ್ಟವಾಗಿ ಆಲೋಚನೆ ಮಾಡಲು, ಸಮಾಜದಲ್ಲಿ ಬೆರೆಯಲು ಹಾಗೂ ಕಲೆಗಳನ್ನು ಹೊರಗೆ ಹಾಕಲು ಅವಕಾಶ ನೀಡಿ.
ಮಕ್ಕಳನ್ನು ಪ್ರೀತಿಸಿ. ಮಕ್ಕಳು ತಮ್ಮ ವಿಷ್ಯ ಮುಂದಿಡಲು ಅವಕಾಶ ನೀಡಿ. ಮಕ್ಕಳು ಸೋತಾಗ ಅವ್ರ ಬೆನ್ನಿಗೆ ನಿಲ್ಲಿ. ಯಾವುದೇ ಷರತ್ತು ವಿಧಿಸದೆ ಮಕ್ಕಳನ್ನು ಪ್ರೀತಿಸಿ. ಇದ್ರಿಂದ ಅವ್ರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತಪ್ಪುಗಳನ್ನು ಮಾಡಿದಾಗ ತಿದ್ದಿ ಹೇಳಿ. ವಿನಾಕಾರಣ ಬೈದು, ಕೋಪ ಮಾಡಿಕೊಳ್ಳದೆ ತಪ್ಪುಗಳಾದಾಗ ಅದಕ್ಕೆ ಕಾರಣವೇನು? ಹೇಗೆ ತಪ್ಪನ್ನು ತಿದ್ದಿಕೊಳ್ಳಬೇಕು ಎಂಬುದನ್ನು ಕಲಿಸಿ.
ಆಗಾಗ ಮಕ್ಕಳಿಗೆ ಸರ್ಪ್ರೈಸ್ ನೀಡಿ. ಅವ್ರು ಗಲಾಟೆ ಮಾಡಿದಾಗ ಚಾಕೋಲೇಟ್, ಆಟಿಕೆ ನೀಡುವ ಬದಲು ಅವ್ರಿಗೆ ತಿಳಿಯದೆ ಅವ್ರಿಷ್ಟದ ವಸ್ತುಗಳನ್ನು ತಂದು ಸರ್ಪ್ರೈಸ್ ನೀಡಿ.
ವಾಸ್ತವದ ಬಗ್ಗೆ ಮಕ್ಕಳಿಗೆ ಹೇಳಬೇಕು. ಹಾಗೆ ಬೇರೆಯವರ ಜೊತೆ ಮಕ್ಕಳನ್ನು ಎಂದೂ ಹೋಲಿಕೆ ಮಾಡಬಾರದು. ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡಿ. ಮಕ್ಕಳಿಗೆ ಆಡಲು ಅವಕಾಶ ನೀಡಿ. ದೈಹಿಕ ಆರೋಗ್ಯ ಮಕ್ಕಳಿಗೆ ಬೇಕೇಬೇಕು. ಮಕ್ಕಳೊಂದಿಗೆ ನೀವೂ ಆಟವಾಡಿದ್ರೆ ಮಕ್ಕಳ ಸಂತೋಷ ದುಪ್ಪಟ್ಟಾಗುತ್ತದೆ.
ಮಕ್ಕಳಿಗೆ ಶಿಸ್ತನ್ನು ಕಲಿಸಿ. ಶಿಸ್ತು ಕಲಿಸುವ ವೇಳೆ ನೀವು ಕಠಿಣವಾಗಿ ವರ್ತಿಸಬೇಕಾಗಿಲ್ಲ. ಸಣ್ಣಪುಟ್ಟ ವಿಷ್ಯಗಳಲ್ಲಿ ಶಿಸ್ತು ಕಲಿಸಿದ್ರೆ ಮಕ್ಕಳು ನಿಧಾನವಾಗಿ ಎಲ್ಲ ವಿಷ್ಯದಲ್ಲೂ ಶಿಸ್ತನ್ನು ರೂಢಿಸಿಕೊಳ್ಳುತ್ತಾರೆ. ಮಕ್ಕಳು ಟಿವಿ, ಇಂಟರ್ನೆಟ್ ಬಳಕೆ ವೇಳೆ ಪೋಷಕರು ಈ ಬಗ್ಗೆ ಗಮನ ನೀಡಿ. ಮಕ್ಕಳು ಯಾವುದನ್ನು ನೋಡುತ್ತಿದ್ದಾರೆಂಬುದು ನಿಮ್ಮ ಗಮನದಲ್ಲಿರಲಿ.