ತಿಂಗಳುಗಳು ಕಳೆದರೂ ಸಹ ಉಕ್ರೇನ್ ಹಾಗೂ ರಷ್ಯಾದ ನಡುವಿನ ಯುದ್ಧ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಈ ಯುದ್ಧದಿಂದಾಗಿ ಈಗಾಗಲೇ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಯುದ್ಧದ ಸಾವು – ನೋವುಗಳ ನಡುವೆಯೇ ಜೀವ ಕಳೆದುಕೊಳ್ಳುವ ನಿರಂತರ ಭಯದಲ್ಲಿರುವ ಉಕ್ರೇನ್ನ ಸಾಕಷ್ಟು ತಾಯಂದಿರು ತಮ್ಮ ಮಕ್ಕಳ ದೇಹದ ಮೇಲೆ ಕುಟುಂಬದ ವಿವರವನ್ನು ಬರೆದಿಡಲು ಆರಂಭಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಕೀವ್ನ ಪತ್ರಕರ್ತೆ ಅನಸ್ತಾಸಿಯಾ ಲ್ಯಾಪಾಟಿನಾ ಪುಟ್ಟ ಕಂದಮ್ಮನ ಬೆನ್ನಮೇಲೆ ಕುಟುಂಬ ಸದಸ್ಯರ ವಿವರಗಳನ್ನು ಬರೆದಿಡಲಾದ ಫೋಟೋವನ್ನು ಶೇರ್ ಮಾಡಿದ್ದಾರೆ. ಒಂದು ವೇಳೆ ತಾವು ಕೊಲ್ಲಲ್ಪಟ್ಟು ಮಕ್ಕಳು ಬದುಕುಳಿದರೆ ಅವರು ತಮ್ಮ ಕುಟುಂಬವನ್ನು ಸೇರಿಕೊಳ್ಳಲು ಸುಲಭವಾಗಲೆಂದು ತಾಯಂದಿರು ಈ ರೀತಿ ಮಾಡುತ್ತಿದ್ದಾರಂತೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ತಾಯಿಯು ತಮ್ಮ ಮಕ್ಕಳ ಬೆನ್ನ ಮೇಲೆ ದೂರವಾಣಿ ಸಂಖ್ಯೆ, ಹಾಗೂ ಸ್ಥಳೀಯ ಭಾಷೆಯಲ್ಲಿ ಕೆಲವು ವಿವರಗಳನ್ನು ಬರೆದಿದ್ದಾರೆ.