ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು ಕೆಲವೊಮ್ಮೆ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುತ್ತಾರೆ.
ಪಾಲಕರ ಮಾತು-ವರ್ತನೆ ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಲ ಮಕ್ಕಳಿಗೆ ಅವರ ತಂದೆ-ತಾಯಿಯೇ ವಿಲನ್ ಆಗಿ ಬಿಡ್ತಾರೆ.
ಇದೊಂದು ಕಠಿಣ ಪರಿಸ್ಥಿತಿ. ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಪಾಲಕರು ಕೆಲವೊಂದು ನಿಯಮ ರೂಪಿಸ್ತಾರೆ. ಅದೇ ಮಕ್ಕಳ ಭವಿಷ್ಯ ಹಾಳು ಮಾಡಿಬಿಡುತ್ತೆ. ಹಾಗಾಗಿ ಕೆಲವೊಂದು ವಿಷಯದಲ್ಲಿ ಮಕ್ಕಳ ಜೊತೆ ಎಷ್ಟು ಜಾಗರೂಕರಾಗಿದ್ದರೂ ಸಾಲದು.
ಎಂದೂ ನಿಮ್ಮ ಮಕ್ಕಳನ್ನು ನಿಮ್ಮ ಜೊತೆ ಹೋಲಿಸಿಕೊಳ್ಳಬೇಡಿ. ನಿಮ್ಮ ವಯಸ್ಸಿನಲ್ಲಿ ನಾನು ಹೀಗಿದ್ದೆ, ಹಾಗಿದ್ದೆ. ನಿನ್ನ ನೋಡು ಎನ್ನಬೇಡಿ. ಇದು ಮಕ್ಕಳು ನಿಮ್ಮನ್ನು ದ್ವೇಷಿಸಲು ಕಾರಣವಾಗಬಹುದು.
ಮಕ್ಕಳು ಯಾವುದಾದರೂ ನಿರ್ಧಾರ ಕೈಗೊಂಡು ನಿಮ್ಮ ಮುಂದೆ ಬಂದರೆ ಅದು ತಪ್ಪೆಂದು ಮುಖಕ್ಕೆ ಹೊಡೆದಂತೆ ಹೇಳಬೇಡಿ. ಅವರಿಗೆ ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ವಿವರಿಸಿ ಹೇಳಿ.
ನೀನು ನಿನ್ನ ಅಕ್ಕ-ಅಣ್ಣನನ್ನು ನೋಡಿ ಕಲಿತುಕೊಳ್ಳಬೇಕು ಎಂಬ ಮಾತು ಬೇಡವೇ ಬೇಡ. ಇದರಿಂದ ನೊಂದುಕೊಳ್ಳುವ ಮಕ್ಕಳು ಅಣ್ಣ-ಅಕ್ಕನನ್ನು ಶತ್ರುಗಳಂತೆ ನೋಡ್ತಾರೆ.
ಮಕ್ಕಳು ನಿಮ್ಮಿಂದ ಪ್ರೀತಿ ಬಯಸ್ತಾರೆ. ಅವರು ನಿಮ್ಮ ಬಳಿ ಬಂದಾಗ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು ಎಂದು ಅವರನ್ನು ದೂರ ಮಾಡಬೇಡಿ. ಇದು ಕೀಳರಿಮೆಗೆ ಕಾರಣವಾಗುತ್ತದೆ.
ಹಾಗೇ ನಿನ್ನಿಂದ ನಾವು ತಲೆ ತಗ್ಗಿಸುವಂತಾಯ್ತು ಎಂಬ ಮಾತು ಕೂಡ ಬೇಡ.
ಮಕ್ಕಳಿಗೆ ಅವರ ಸ್ನೇಹಿತರೇ ಎಲ್ಲ. ಆದ್ರೆ ನಿನ್ನ ಸ್ನೇಹಿತರು ಸರಿ ಇಲ್ಲ. ಅವರಿಂದ ದೂರ ಇರು ಎಂದು ಉಪದೇಶ ನೀಡಿ, ಅವರನ್ನು ಸ್ನೇಹಿತರಿಂದ ದೂರ ಮಾಡಬೇಡಿ.