ಮಕ್ಕಳು ನಿಂತರೂ ಕುಳಿತರೂ ಹಾಗೆ ಮಾಡಬೇಡ, ಹೀಗೆ ಮಾಡು ಎನ್ನುತ್ತಿರುತ್ತೀರಾ? ಮಕ್ಕಳ ಬಗ್ಗೆ ನೀವು ಕಾಳಜಿ ವಹಿಸುತ್ತಿರುವುದು ಹೆಚ್ಚುತ್ತಿದೆಯೇ. ಇದು ಮಕ್ಕಳಿಗೂ ಹಿಂಸೆಯಾಗುತ್ತಿದೆಯೇ?
ಮಕ್ಕಳ ಬಗ್ಗೆ ಹೆತ್ತವರು ಕಾಳಜಿ ವಹಿಸುವುದೇನೋ ಸರಿ. ಆದರೆ ಅದು ಅವರ ದೈನಂದಿನ ಚಟುವಟಿಕೆಗಳಿಗೂ ಕಿರಿಕಿರಿ ಉಂಟು ಮಾಡುತ್ತಿದೆಯೇ? ಮಕ್ಕಳು ಪ್ರತಿಯೊಂದು ಕೆಲಸಕ್ಕೂ ನಿಮ್ಮನ್ನೇ ಅವಲಂಬಿಸುವಂತೆ ಆಗುತ್ತಿದೆಯೇ.
ಮಕ್ಕಳು ಮಾಡುವ ಸಣ್ಣ ಪುಟ್ಟ ವಿಷಯಗಳ ಮೇಲೂ ನಿಯಂತ್ರಣ ಹೇರಲು ಹೋಗದಿರಿ. ಅವರು ಸೇಫ್ ಅದ ಜಾಗದಲ್ಲಿ ಕುಳಿತು ಸೇಫ್ ಆದ ವಸ್ತುಗಳೊಂದಿಗೆ ಆಡುತ್ತಿದ್ದರೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಿ. ತಪ್ಪು ಮಾಡಿದ ಬಳಿಕ ಮಕ್ಕಳು ಸರಿ ಮಾಡಲು ಕಲಿಯುತ್ತಾರೆ. ಹಾಗಾಗಿ ಪ್ರತಿಯೊಂದು ಆಟವನ್ನು ನಿಮ್ಮ ಮುಂದೆಯೇ ಪರ್ಫೆಕ್ಟ್ ಆಗಿಯೇ ಆಡಬೇಕೆಂದು ಬಯಸದಿರಿ.
ಮಕ್ಕಳು ಗೆಳೆಯರೊಂದಿಗೆ ಆಡುವಾಗ ಸೋಲು ಗೆಲುವು ಇದ್ದಿದ್ದೇ. ಅವರನ್ನು ಗೆಲ್ಲುವಂತೆ ಪ್ರೋತ್ಸಾಹಿಸಿ. ಬೆಂಬಲಿಸಿ. ಅವರ ಸೋಲಿಗೆ ಸಮಾಧಾನ ಹೇಳಿ. ನೀವು ಆಟದಲ್ಲಿ ಭಾಗಿಯಾಗಲು ಹೋಗದಿರಿ. ಮಕ್ಕಳಿಗೆ ಅವರದೇ ಆದ ಸ್ಪೇಸ್ ನೀಡಿ. ಅದರ ನಿರ್ವಹಣೆ ನೋಡಿಕೊಳ್ಳಿ. ಆದರೆ ಪದೇ ಪದೇ ತಲೆ ಹಾಕಲು ಹೋಗಿ ಅವರಿಗೂ ನಿಮಗೂ ಕಿರಿಕಿರಿ ಮಾಡಿಕೊಳ್ಳಬೇಡಿ.