ಮಕ್ಕಳು ಕಿರಿಕಿರಿ ಮಾಡುವುದು ಸಾಮಾನ್ಯ. ಆದ್ರೆ ಪ್ರತಿ ಮಾತಿಗೂ ಗಲಾಟೆ, ಕೈನಲ್ಲಿರುವ ವಸ್ತುವನ್ನು ಎಸೆಯುವುದು, ಮುರಿಯುವುದು ಮಾಡಿದ್ರೆ ಮಕ್ಕಳನ್ನು ಶಾಂತಗೊಳಿಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಪಾಲಕರು ಮಕ್ಕಳನ್ನು ಮನಶಾಸ್ತ್ರಜ್ಞರಿಗೆ ತೋರಿಸುವುದು ಒಳ್ಳೆಯದು. ಮಕ್ಕಳ ಈ ಗಲಾಟೆಗೆ ಎರಡು ಕಾರಣವಿರುತ್ತದೆ. ಒಂದು ಹಾರ್ಮೋನ್ ನಲ್ಲಾಗುವ ಬದಲಾವಣೆಯಾದ್ರೆ ಇನ್ನೊಂದು ಮಕ್ಕಳು ವಾಸವಾಗಿರುವ ವಾತಾವರಣ.
ವಾಸವಾಗಿರುವ ಪರಿಸರ ಮಕ್ಕಳ ಕೋಪಕ್ಕೆ ಕಾರಣವಾದ್ರೆ ಭಯಪಡಬೇಕಾಗಿಲ್ಲ. ಹಾರ್ಮೋನ್ ಬದಲಾವಣೆ ಗಲಾಟೆಗೆ ಕಾರಣವಾದ್ರೆ ತಜ್ಞರ ಭೇಟಿ ಅಗತ್ಯವಾಗುತ್ತದೆ. ಮಕ್ಕಳನ್ನು ಶಾಂತಗೊಳಿಸಲು ನೀವು ಮನೆಯಲ್ಲಿ ಕೆಲ ಉಪಾಯವನ್ನು ಅನುಸರಿಸಬಹುದು.
ಐದು ವರ್ಷದಿಂದ 8 ವರ್ಷದ ಮಕ್ಕಳ ಕಿರಿಕಿರಿಗೆ ಮೂರು ಕಾರಣಗಳಿರುತ್ತವೆ. ತಮಗಿಂತ ತಮ್ಮ ಸಹೋದರ-ಸಹೋದರಿಯರನ್ನು ಪಾಲಕರು ಹೆಚ್ಚು ಪ್ರೀತಿಸುತ್ತಾರೆಂಬ ಭಾವನೆ. ಅವ್ರ ಆಸೆ ಈಡೇರಿಸದೆ ಪದೇ ಪದೇ ಹೊಡೆಯುವುದು ಇನ್ನೊಂದು ಕಾರಣ. ಮೂರನೇಯದು ಗಂಭೀರ ಕಾರಣ. ಲೈಂಗಿಕ ಕಿರುಕುಳ. ಈ ಮೂವರಲ್ಲಿ ನಿಮ್ಮ ಮಕ್ಕಳನ್ನು ಯಾವುದು ಕಾಡುತ್ತಿದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.
14-25 ವರ್ಷ ವಯಸ್ಸಿನ ಮಕ್ಕಳ ಕೋಪಕ್ಕೆ ಮುಖ್ಯ ಕಾರಣ ಪಾಲಕರ ವರ್ತನೆ. ಪದೇ ಪದೇ ಬೈಯ್ಯುವುದು, ತಪ್ಪನ್ನು ಎತ್ತಿ ಹೇಳುವುದು ಸೇರಿದಂತೆ ಅನೇಕ ಕಾರಣಗಳಿರುತ್ತವೆ. ಹಾರ್ಮೋನ್ ಬದಲಾವಣೆ ಈ ವಯಸ್ಸಿನವರ ಕಿರಿಕಿರಿಗೆ ಮುಖ್ಯ ಕಾರಣವಾಗುತ್ತದೆ.
ಮಕ್ಕಳು ಕೋಪಗೊಂಡಾಗ ಪಾಲಕರು ಕೋಪಗೊಳ್ಳುವುದು ಸಾಮಾನ್ಯ. ಆದ್ರೆ ಪಾಲಕರು ಕೋಪವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಇಬ್ಬರೂ ಕೋಪಗೊಂಡ್ರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಮಕ್ಕಳ ಮಾತನ್ನು ಪೂರ್ಣವಾಗಿ ಕೇಳಿ. ಅವ್ರು ಶಾಂತರಾದ್ಮೇಲೆ ಪ್ರೀತಿಯಿಂದ ಅವರಿಗೆ ಬುದ್ದಿ ಹೇಳಿ. ಹಾಗೆ ಮಕ್ಕಳನ್ನು ದೈಹಿಕ ಚಟುವಟಿಕೆಯಲ್ಲಿ ಬ್ಯುಸಿಗೊಳಿಸಿ. ಕ್ರಿಕೆಟ್, ಬ್ಯಾಡ್ಮಿಂಟನ್, ಕರಾಟೆ, ಈಜು ಸೇರಿದಂತೆ ಯಾವುದಾದ್ರೂ ಚಟುವಟಿಕೆಯಲ್ಲಿ ಬ್ಯುಸಿಗೊಳಿಸಿ.
ಮಕ್ಕಳನ್ನು ಯಾರ ಮುಂದೆಯೂ ಬೈದು, ಹೊಡೆದು ಮಾಡಬೇಡಿ. ಮಕ್ಕಳ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬೇಡಿ. ಎಲ್ಲ ಪ್ರಯತ್ನದ ನಂತ್ರವೂ ಮಕ್ಕಳು ಸುಧಾರಿಸದೆ ಹೋದ್ರೆ ಮನಶಾಸ್ತ್ರಜ್ಞರ ಸಹಾಯ ಪಡೆಯಿರಿ. ತಜ್ಞರು ಮಕ್ಕಳ ಸ್ಥಿತಿ ನೋಡಿ ಏನು ಮಾಡಬೇಕೆಂದು ಸಲಹೆ ನೀಡ್ತಾರೆ. ಮನೆಯಲ್ಲಿ ಗಲಾಟೆ ನಡೆಯುತ್ತಿದ್ದರೆ ಮನೆ ವಾತಾವರಣ ಸುಧಾರಿಸಿ. ನಿಮ್ಮ ಗಲಾಟೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.