ಹೈದರಾಬಾದ್: ಮೊಬೈಲ್ ಒಂದಿದ್ದರೆ ಸಾಕು ಈಗಿನ ಮಕ್ಕಳಿಗೆ ಬೇರೆನೂ ಆಟ-ಪಾಠ ಬೇಡವೇ ಬೇಡ ಎಂಬಂತಾಗಿದೆ. ಮಕ್ಕಳು ಅತಿಯಾಗಿ ಮೊಬೈಲ್ ನಲ್ಲಿ ಮಗ್ನರಾಗಿದ್ದರೆ, ಅತಿಯಾದ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದರೆ ಪೋಷಕರು ಎಚ್ಚರ ವಹಿಸಲೇಬೇಕು. ಇಲ್ಲೋರ್ವ ಬಾಲಕ ವಿಡಿಯೋದಲ್ಲಿರುವಂತೆ ಅನುಕರಣೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಯೂಟ್ಯೂಬ್ ವಿಡಿಯೋ ನೋಡುತ್ತಿದ್ದ 11 ವರ್ಷದ ಬಾಲಕ ಅದಲ್ಲಿರುವಂತೆ ಅನುಕರಣೆ ಮಾಡಲು ಹೋಗಿ ಸಾವಿಗೆ ಶರಣಾಗಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾದಲ್ಲಿ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ಉದಯ್ ಮೃತ ಬಾಲಕ.
ಉದಯ್ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಯೂಟ್ಯೂಬ್ ನಲ್ಲಿ ಕಾಮಿಡಿ ವಿಡಿಯೋಗಳನ್ನು ನೋಡುತ್ತಿದ್ದ. ಹೀಗೆ ವಿಡಿಯೋಗಳನ್ನು ನೋಡುತ್ತಾ ಅನುಕರಣೆಯನ್ನು ಮಾಡುತ್ತಿದ್ದ. ಎಂದಿನಂತೆ ರಾತ್ರಿ ಊಟ ಮುಗಿಸಿ ಮೊಬೈಲ್ ನೋಡುತ್ತಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ ಬಾಲಕ ಎಷ್ಟು ಹೊತ್ತಾದರೂ ಬಾಗಿಲು ತೆಗೆದಿಲ್ಲ. ಕರೆದರೂ ಆ ಕಡೆಯಿಂದ ಯಾವುದೇ ಸುಳಿವಿಲ್ಲ. ಗಾಬರಿಯಾದ ಪೋಷಕರು ಬಾಗಿಲು ಒಡೆದು ನೋಡಿದಾಗ ಬಾಲಕ ಸಾವನ್ನಪ್ಪಿದ್ದ.
ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ನೇತಾಡುತ್ತಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.