ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು ವ್ಯಸನವಾದ್ರೆ ಮಕ್ಕಳು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.
ನೆಟ್ ನೋಡಿ ಮಗ ಹಾಳಾದ ಎನ್ನುವ ಬದಲು ಮಕ್ಕಳು ಹಾಳಾಗುವ ಮೊದಲು ಪಾಲಕರು ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಮೇಲೆ ಸದಾ ಕಣ್ಣಿಟ್ಟಿರಬೇಕು. ಮಕ್ಕಳು ಯಾವ ಸೈಟ್ ನೋಡ್ತಿದ್ದಾರೆನ್ನುವ ಬಗ್ಗೆ ಗಮನವಿರಬೇಕು. ಇದಕ್ಕೆ ಪೇರೆಂಟ್ಸ್ ಕಂಟ್ರೋಲ್ ಆಪ್ ಗಳು ಬಂದಿವೆ. ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಇದನ್ನು ಮಕ್ಕಳ ಆಟ ಹಾಗೂ ಅಪ್ಲಿಕೇಷನ್ ಗೆ ಲಿಂಕ್ ಮಾಡಿಕೊಳ್ಳಬೇಕು. ಇದು ನಿಮ್ಮ ಮಗುವಿಗೆ ಯಾವ ಆಪ್ ಸೂಕ್ತವಲ್ಲ ಎಂಬ ಮಾಹಿತಿಯನ್ನು ನಿಮಗೆ ನೀಡುತ್ತದೆ.
ಇಂಟರ್ನೆಟ್ ಬಗ್ಗೆ ಮಕ್ಕಳ ಜೊತೆ ಮಾತನಾಡಬೇಕು. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ವಿವರಿಸಬೇಕು. ನೆಟ್ ಗಿಂತ ಹೊರಗಿನ ಪ್ರಪಂಚದ ಜೊತೆ ಬೆರೆತಲ್ಲಿ ಏನೆಲ್ಲ ಲಾಭವಿದೆ ಎಂಬುದನ್ನು ಅವರಿಗೆ ವಿವರಿಸಿ ಹೇಳಬೇಕಾಗುತ್ತದೆ.
ಕಂಪ್ಯೂಟರ್, ಮೊಬೈಲ್ ಗೇಮ್ ಗಳು ವಿದ್ಯಾಭ್ಯಾಸದ ಮೇಲೆ ಯಾವ ಪರಿಣಾಮ ಬೀರುತ್ತದೆ. ಹಾಗೆ ಇದ್ರಿಂದ ಮುಂದೆ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಬೇಕು. ಗದರಿದ್ರೆ ಮಕ್ಕಳು ಪಟ್ಟು ಹಿಡಿಯುತ್ತಾರೆ. ಹಾಗಾಗಿ ನಿಧಾನವಾಗಿ ಅವರಿಗೆ ಅರ್ಥವಾಗುವಂತೆ ತಿಳಿಸಬೇಕು.
ಇಂಟರ್ ನೆಟ್ ಬಳಕೆ ಬಗ್ಗೆ ನಿಯಮ ರೂಪಿಸಬೇಕು. ಮಕ್ಕಳು ಯಾವ ಸಮಯದಲ್ಲಿ ನೆಟ್ ಬಳಸಬೇಕು ಮತ್ತು ಎಷ್ಟು ಸಮಯ ಬಳಸಬೇಕೆಂಬದಕ್ಕೆ ನಿಯಮ ರೂಪಿಸಿ.
ಸಾಮಾಜಿಕ ಜಾಲತಾಣ ಬಳಸುತ್ತಿದ್ದಲ್ಲಿ ಯಾವೆಲ್ಲ ಫೋಟೋ ಹಾಗೂ ವಿಡಿಯೋಗಳನ್ನು ನೋಡಬೇಕು ಹಾಗೆ ಯಾವ ವ್ಯಕ್ತಿಗಳಿಂದ ದೂರವಿರಬೇಕೆಂಬುದನ್ನು ವಿವರಿಸಬೇಕಾಗುತ್ತದೆ. ಮಕ್ಕಳ ಸ್ನೇಹಿತರ ಬಗ್ಗೆಯೂ ಗಮನವಿಟ್ಟಿರಬೇಕು. ನೀವು ಅವರ ಸ್ನೇಹಿತರಾಗಿರಬೇಕು.