ಮನೆಯಲ್ಲಿ ಮಕ್ಕಳಿದ್ದರೆ ಏನಾದರೂ ತಿಂಡಿ ಕೇಳುತ್ತಲೇ ಇರುತ್ತಾರೆ. ಅದು ಸಿಹಿ ಇಷ್ಟಪಡುವ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಮಕ್ಕಳ ಬಾಯಿ ರುಚಿ ತಣಿಸುವುದಕ್ಕೆ ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಬರ್ಫಿ ಇದೆ ಒಮ್ಮೆ ಮಾಡಿ ರುಚಿ ನೋಡಿ.
ಬೇಕಾಗುವ ಸಾಮಗ್ರಿಗಳು:
2 ½ ಕಪ್ – ಖೋವಾ, ¾ ಕಪ್ – ಸಕ್ಕರೆ, ಚಿಟಿಕೆ – ಏಲಕ್ಕಿ ಪುಡಿ, 1 ಟೀ ಸ್ಪೂನ್ – ರೋಸ್ ವಾಟರ್, 1 ಟೀ ಸ್ಪೂನ್ – ಕೋಕೋ ಪೌಡರ್, ತೆಂಗಿನೆಣ್ಣೆ – 5 ಹನಿಗಳಷ್ಟು.
ಮಾಡುವ ವಿಧಾನ:
ಖೋವಾವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿಕೊಂಡು ಗ್ಯಾಸ್ ಮೇಲೆ ಇಡಿ. ಸಣ್ಣ ಉರಿ ಮಾಡಿಕೊಂಡು ಕೈಯಾಡಿಸುತ್ತಲೇ ಇರಿ. ಖೋವಾ ಬಿಸಿಯಾಗುತ್ತಲೇ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ, ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಕರಗಿ ಈ ಮಿಶ್ರಣ ಹಲ್ವಾ ರೀತಿ ಆಗುತ್ತದೆ.
ಕೈಬಿಡದೇ ಮಿಕ್ಸ್ ಮಾಡುತ್ತಲೇ ಇರಿ. ನಂತರ ಇದು ತಳ ಬಿಡುವುದಕ್ಕೆ ಶುರುವಾಗುತ್ತದೆ. ಆಗ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗುವುದಕ್ಕೆ ಬಿಟ್ಟುಬಿಡಿ. ಈ ಮಿಶ್ರಣವನ್ನು ಎರಡು ಭಾಗ ಮಾಡಿಕೊಂಡು ಚೆನ್ನಾಗಿ ನಾದಿಕೊಂಡು ಒಂದು ಭಾಗದ ಮಿಶ್ರಣವನ್ನು ಚೌಕಾಕಾರದ ರೀತಿ ಮಾಡಿ ಬಟರ್ ಪೇಪರ್ ಮೇಲೆ ಹಾಕಿ.
ನಂತರ ತೆಗೆದಿಟ್ಟುಕೊಂಡ ಇನ್ನೊಂದು ಭಾಗದ ಮಿಶ್ರಣಕ್ಕೆ ಕೋಕೋ ಪೌಡರ್ ಸೇರಿಸಿ ಕೈಗೆ ತುಸು ಎಣ್ಣೆ ಸವರಿಕೊಂಡು ನಾದಿಕೊಳ್ಳಿ. ಇದನ್ನು ಕೂಡ ಚೌಕಾಕಾರದ ಶೇಪ್ ಮಾಡಿಕೊಂಡು ಮೊದಲು ಮಾಡಿಕೊಂಡ ಮಿಶ್ರಣದ ಮೇಲೆ ಇದನ್ನು ಇಟ್ಟು ನಿಧಾನವಾಗಿ ಒತ್ತಿ ಫ್ರಿಡ್ಜ್ ನಲ್ಲಿ 30 ನಿಮಿಷಗಳ ಕಾಲ ಇಡಿ. ನಂತರ ಹೊರಗೆ ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಬರ್ಫಿ ಕತ್ತರಿಸಿಕೊಂಡು ಸವಿಯಿರಿ.