ಕೇಕ್ ಮಕ್ಕಳಿಗೆ ತುಂಬಾ ಇಷ್ಟ. ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ಮಾಡಿಕೊಟ್ಟರೆ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಇದನ್ನು ಮಾಡುವುದಕ್ಕೆ ತುಂಬಾ ಸಮಯ ಕೂಡ ತೆಗೆದುಕೊಳ್ಳುವುದಿಲ್ಲ. ಮಾಡುವ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಬೇಕಾಗುವ ಸಾಮಗ್ರಿಗಳು-3 ಕಪ್ ಮೈದಾ ಹಿಟ್ಟು, 2 ಟೀ ಸ್ಪೂನ್ ಬೇಕಿಂಗ್ ಪೌಡರ್, 1 ಟೀ ಸ್ಪೂನ್-ಬೇಕಿಂಗ್ ಸೋಡ, 1 ಚಿಟಿಕೆ ಉಪ್ಪು, 1 ಕಪ್ –ಬೆಣ್ಣೆ, 2 ಕಪ್ –ಸಕ್ಕರೆ, 4 ಮೊಟ್ಟೆ, 1 ಕಪ್-ಮಜ್ಜಿಗೆ, 2 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, ಚಾಕೋಲೇಟ್ ಬಟರ್ ಕ್ರೀಂ.
ಒಂದು ದೊಡ್ಡ ಬೌಲ್ ಗೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಣ್ಣೆಗೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕ್ರೀಂ ರೀತಿ ಆಗಬೇಕು ಇವೆರೆಡರ ಮಿಶ್ರಣ. ನಂತರ ಇದಕ್ಕೆ ಮೊಟ್ಟೆ ಸೇರಿಸಿ ಮಿಕ್ಸ್ ಮಾಡಿ. ನಂತರ ಹಿಟ್ಟನ್ನು ಸೇರಿಸಿ. ಆಮೇಲೆ ಮಜ್ಜಿಗೆಯನ್ನು ಸ್ವಲ್ಪ ಸ್ವಲ್ಪ ಸೇರಿಸಿ ಕೈಯಾಡಿಸಿ.
ನಂತರ ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೇಕ್ ಪ್ಯಾನ್ ಗೆ ಸ್ವಲ್ಪ ತುಪ್ಪ ಸವರಿಕೊಳ್ಳಿ. ಆಮೇಲೆ ಈ ಮಿಶ್ರಣವನ್ನು ಅದಕ್ಕೆ ಹಾಕಿ ಓವೆನ್ ನಲ್ಲಿ 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೇಕ್ ತಣ್ಣಗಾದ ಮೇಲೆ ಚಾಕೋಲೇಟ್ ಬಟರ್ ಕ್ರಿಂ ಅನ್ನು ಸವರಿದರೆ ರುಚಿಕರವಾದ ವೆನಿಲ್ಲಾ ಕೇಕ್ ರೆಡಿ.