
ಸಣ್ಣ ಮಕ್ಕಳ ಅಳುವಿನ ಕಾರಣವನ್ನು ತಿಳಿಯುವುದು ಬಹಳ ಕಷ್ಟ, ಅದರಲ್ಲೂ ನೆಗಡಿ, ಜ್ವರ ಕಾಡುವಾಗ ಯಾವ ಕಾರಣಕ್ಕೆ ಮಗು ರಚ್ಚೆ ಹಿಡಿಯುತ್ತದೆ ಎಂಬುದು ಅರಿವಾಗುವುದೇ ಇಲ್ಲ.
ಜ್ವರ ಬಂದಾಗ ಮಕ್ಕಳಲ್ಲಿ ಹಸಿವು ಕಡಿಮೆ ಆಗುತ್ತದೆ. ಅಗ ಮಕ್ಕಳಿಗೆ ಇಷ್ಟವಾಗುವ ಮತ್ತು ಪೌಷ್ಠಿಕಾಂಶಭರಿತ ಆಹಾರ ನೀಡಬೇಕು. ಮಗುವಿಗೆ ಎದೆಹಾಲು ತಪ್ಪದೆ ಕೊಡುವುದರಿಂದ ಜ್ವರದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.
ಹೆಸರುಬೇಳೆಯ ದಾಲ್ ಕಿಚಡಿ ತಯಾರಿಸಿ ಕೊಡುವುದರಿಂದ ಸೋಂಕಿನ ವಿರುದ್ಧ ಹೋರಾಟ ಸುಲಭವಾಗುತ್ತದೆ. ಇದರಲ್ಲಿ ಪ್ರೊಟೀನ್ ಹೆಚ್ಚಿದೆ ಮತ್ತು ಸುಲಭದಲ್ಲಿ ಜೀರ್ಣವಾಗುತ್ತದೆ. ಯಾವುದೇ ಮಸಾಲೆ ಹಾಕದೆ ಇದನ್ನು ತಯಾರಿಸಿ. ಬಿಸಿ ಇರುವಾಗಲೇ ತಿನ್ನಲು ಕೊಡಿ.
ಗೆಣಸನ್ನು ಮಗುವಿನ ಅಹಾರದಲ್ಲಿ ಸೇರಿಸಿ. ಚೀನಿಕಾಯಿಯೂ ಈ ಅವಧಿಯಲ್ಲಿ ಉತ್ತಮ. ಬಿಸಿಯಾದ ಸೂಪ್ ಕುಡಿಸಿ. ಓಟ್ ಮೀಲ್ಸ್ ಉತ್ತಮ ಪ್ರೊಟೀನ್ ಹೊಂದಿದ್ದು, ಮಕ್ಕಳಿಗೆ ಶಕ್ತಿ ನೀಡುತ್ತದೆ.
ಸ್ವಲ್ಪ ಉಪ್ಪು ಮತ್ತು ಅರಶಿನ ಹಾಕಿ. ಇದರಿಂದ ಪ್ರತಿರೋಧಕ ಶಕ್ತಿ ಹೆಚ್ಚುವುದು. ಕ್ಯಾರೆಟ್, ಸೇಬು ಅಥವಾ ಇತರ ಹಣ್ಣು, ತರಕಾರಿಗಳ ಪ್ಯೂರಿ ತಯಾರಿಸಿ ತಿನ್ನಿಸಿ. ಬಾರ್ಲಿಯನ್ನು ಬೇಯಿಸಿ ಅದರ ಗಂಜಿ ಅಥವಾ ಸೂಪ್ ನೀಡಬಹುದು. ಬಾರ್ಲಿಯಲ್ಲಿರುವ ಪೋಷಕಾಂಶಗಳು ಮಗುವಿನ ದೇಹಕ್ಕೆ ಸಹಕಾರಿಯಾದುದು.