ಡ್ರೈ ಫ್ರೂಟ್ಸ್ ಅಂದ್ರೆ ಈಗಿನ ಮಕ್ಕಳು ಒಂಥರಾ ಅಲರ್ಜಿಯ ರೀತಿ ಭಾವಿಸುತ್ತಾರೆ. ಅದನ್ನು ಹಾಗೆಯೇ ಕೊಟ್ಟರೆ ತಿನ್ನದೇ ಮುಖ ತಿರುಗಿಸುತ್ತಾರೆ.
ಆದ್ರೆ ತಾಯಂದಿರ ಮನಸ್ಸು ಕೇಳಬೇಕಲ್ಲಾ? ಅವರಿಗೆಂದೇ ಈ ವಿಶೇಷವಾದ ಡ್ರೈ ಫ್ರೂಟ್ಸ್ ಪವರ್ ಲಡ್ಡು ಮಾಡುವ ಬಗೆಯನ್ನು ತಿಳಿಸಿದ್ದೇವೇ. ಸ್ವತಃ ನೀವೇ ಮಾಡಿ ಮಕ್ಕಳಿಗೆ ಹಾಲಿನ ಜೊತೆಗೆ ಕೊಟ್ಟು ನೋಡಿ. ಕಣ್ಣರಳಿಸಿಕೊಂಡು ಬಾಯಿ ಚಪ್ಪರಿಸುತ್ತಾ ಕ್ಷಣ ಮಾತ್ರದಲ್ಲಿ ಖಾಲಿ ಮಾಡಿರುತ್ತಾರೆ.
ಬೇಕಾಗಿರುವ ಸಾಮಗ್ರಿಗಳು : 100 ಗ್ರಾಂ ಬಾದಾಮಿ, 100 ಗ್ರಾಂ ಗೋಡಂಬಿ, 100 ಗ್ರಾಂ ವಾಲ್ನಟ್ಸ್, 15-20 ಕರ್ಜೂರ, ಅಗತ್ಯವಿರುವಷ್ಟು ನೀರು.
ಮಾಡುವ ವಿಧಾನ : ಮೊದಲಿಗೆ ಬಾದಾಮಿ, ಗೋಡಂಬಿ, ವಾಲ್ನಟ್ಸ್ ಗಳನ್ನು ಸಣ್ಣದಾಗಿ ಕತ್ತರಿಸಿಕೊಂಡು, ಒಂದು ಪ್ಯಾನ್ ಗೆ ಹಾಕಿ ಮೀಡಿಯಂ ಫ್ಲೇಮಿನಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಕರ್ಜೂರಗಳನ್ನು ಬೀಜದಿಂದ ಬೇರ್ಪಡಿಸಿ ಸಣ್ಣದಾಗಿ ಕತ್ತರಿಕೊಳ್ಳಿ. ಇದಕ್ಕೆ ಪುಡಿ ಮಾಡಿಕೊಂಡ ಮಿಶ್ರಣವನ್ನು ಬೆರೆಸಿ, ಅಗತ್ಯವಿರುವಷ್ಟು ನೀರನ್ನು ಬೆರೆಸುತ್ತಾ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಸಂಜೆಯ ಹೊತ್ತು ಬಿಸಿ ಬಿಸಿ ಹಾಲಿನೊಂದಿಗೆ ಸವಿಯಲು ನೀಡಿ.