ಸಣ್ಣ ಮಕ್ಕಳು ತುಂಬಾ ಸೂಕ್ಷ್ಮ, ಅವರನ್ನು ಎಷ್ಟೇ ಜೋಪಾನವಾಗಿ ನೋಡಿ ಕೊಂಡರು ಕಡಿಮೆಯೇ. ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟು ಕೊಂಡರು ಮಕ್ಕಳಿಗೆ ಕೆಮ್ಮು, ನೆಗಡಿ, ಕಿವಿ ನೋವು, ಅಸ್ತಮಾ, ಜ್ವರ ಹೀಗೆ ಹಲವು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಸಮಸ್ಯೆಗಳಿಗೆ ಒಂದೇ ಮದ್ದು ಅದು ತುಳಸಿ. ಹೌದು ತುಳಸಿ ಎಲೆಯನ್ನು ಬಳಸಿ ಮಕ್ಕಳಿಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಅಂತ ನೋಡಿ.
* ತುಳಸಿಯ ಎಲೆಗಳನ್ನು ತುಸು ಬೆಚ್ಚಗೆ ಮಾಡಿ ಮಕ್ಕಳ ಕಿವಿಗೆ ಹಾಕುವುದರಿಂದ ಕಿವಿನೋವು ಶಾಂತವಾಗುತ್ತದೆ.
* ಮಕ್ಕಳಿಗೆ ಕಿವಿ ಸೋರುತ್ತಿದ್ದರೆ, ತುಳಸಿ ಮತ್ತು ಬೇವಿನ ಎಲೆಗಳ ರಸದಲ್ಲಿ ಜೇನುತುಪ್ಪವನ್ನು ಸೇರಿಸಿ ಕಿವಿಯಲ್ಲಿ ಹಾಕಬೇಕು.
* ತುಳಸಿಯ ಹೂವನ್ನು ಹಸಿಶುಂಠಿಯ ರಸದಲ್ಲಿ ಅರೆದು, ನೆಕ್ಕುತ್ತಾ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.
* ನಿತ್ಯ ಮೂವತ್ತರಿಂದ ಅರವತ್ತು ಹನಿ ತುಳಸಿ ರಸವನ್ನು ಮಕ್ಕಳಿಗೆ ನೀಡುತ್ತಿದ್ದರೆ, ಶ್ಲೇಷ್ಮ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
* ಮಕ್ಕಳಿಗೆ ಕಫ, ಕೆಮ್ಮು ಇದ್ದರೆ 1 ಚಮಚ ತುಳಸಿ ರಸವನ್ನು 2 ಅಥವಾ 3 ಸಲದಂತೆ ನೀಡಬೇಕು.
* ಮಕ್ಕಳು ಶೀತದ ತೊಂದರೆಗಳಿಗೆ ಬಹು ಬೇಗ ಗುರಿಯಾಗುತ್ತಿದ್ದರೆ, ನಿತ್ಯ ಒಂದು ಅಥವಾ ಎರಡು ತುಳಸಿ ಎಲೆಗಳನ್ನು ಸೇವಿಸಲು ನೀಡಿ. ಇದರಿಂದ ಶೀತ ಕಡಿಮೆಯಾಗುತ್ತದೆ.
* ತುಳಸಿಯ ರಸವನ್ನು ಜೇನು ತುಪ್ಪ ಸೇರಿಸಿ ಸೇವಿಸಲು ನೀಡಿದರೆ ಮಕ್ಕಳಲ್ಲಿ ವಾಂತಿ ತೊಂದರೆ ನಿವಾರಣೆಯಾಗುತ್ತದೆ.
* ತುಳಸಿಯ ಬೀಜವನ್ನು ಅರೆದು ಹಾಲಿನಲ್ಲಿ ಸೇರಿಸಿ ಮಕ್ಕಳಿಗೆ ನೀಡಿದರೆ ವಾಂತಿ ತೊಂದರೆ ದೂರವಾಗುತ್ತದೆ.
* ಮಕ್ಕಳಿಗೆ ಅಸ್ತಮಾ ರೋಗದ ತೊಂದರೆ ಇದ್ದಾಗ ತುಳಸಿ ಹಾಗೂ ಹಸಿ ಶುಂಠಿಯ ರಸ ನೀಡಿ.
* ಹಾಲಿನಲ್ಲಿ 5 ತುಳಸಿ ಎಲೆ ಮತ್ತು ಲವಂಗವನ್ನು ಹಾಕಿ ಬಿಸಿ ಮಾಡಿ ಮಕ್ಕಳಿಗೆ ಕೊಡುವುದರಿಂದ ಜ್ವರ ನಿಲ್ಲುತ್ತದೆ.
* ತುಳಸಿಯ ಎಲೆಗಳ ರಸದಲ್ಲಿ ಸ್ವಲ್ಪ ಸೈಂಧವ ಲವಣವನ್ನು ಬೆರೆಸಿ ಮಕ್ಕಳಿಗೆ ನೀಡುವುದರಿಂದ ಮಲಬದ್ಧತೆ ತೊಲಗುತ್ತದೆ.