“ಈಗಿನ ಕಾಲದ ಮಕ್ಕಳು ನಮ್ಮ ಮಾತೇ ಕೇಳಲ್ಲ, ಬೇಕು ಅಂತ ಕೇಳಿದ್ದು ಬೇಕೆ ಬೇಕು ಅಷ್ಟು ಹಠ “ಇದು ಸಾಮಾನ್ಯವಾಗಿ ಎಲ್ಲಾ ಪೋಷಕರು ಪರಸ್ಪರ ಮಾತನಾಡಿಕೊಳ್ಳುವಾಗ ಹೇಳೋ ದೂರು.
ಅಮ್ಮಾ, ಮೂವೀಗೆ ಹೋಗೋಣ…… ಅಪ್ಪಾ, ಈ ಸಲ ನನಗೆ ಈ ಥರ ಡ್ರೆಸ್ ಬೇಕು…… ತಿನ್ನೋಕೆ ಅದು ಬೇಕು, ಇದು ಬೇಕು. ಈ ಸಲ ನನಗೆ ಟ್ರಿಪ್ ಗೆ ಕಳಿಸ್ತಿರಾ ಅಲ್ವಾ ? ಹೀಗೆ ಮಕ್ಕಳ ಬೇಡಿಕೆಗೆ ಕೊನೆಯೇ ಇರುವುದಿಲ್ಲ. ಪೋಷಕರಿಗೂ ಈ ಎಲ್ಲಾ ಬೇಡಿಕೆಗಳಿಗೆ ಎಸ್ ಹೇಳಬೇಕೇ ಅಥವಾ ನೋ ಹೇಳಬೇಕೇ ಅನ್ನೋ ಗೊಂದಲ. ಪ್ರತಿ ಸಲ ಮಕ್ಕಳು ಕೇಳಿದ್ದಕ್ಕೆಲ್ಲಾ ಇಲ್ಲ, ಬೇಡ ಅಂದರೆ ಅವರಿಗೆ ಬೇಸರವಾಗತ್ತೆ ಅನ್ನೋ ಕಾರಣಕ್ಕೆ ಸುಮ್ಮನೆ ಸುಳ್ಳು ಪ್ರಾಮಿಸ್ ಗಳನ್ನು ಮಾಡಿ ಪೇಚಿಗೆ ಸಿಲುಕುವ ತಂದೆ – ತಾಯಿಯರೇ ಹೆಚ್ಚು.
ಹೇಳಿದ ಮಾತಿನ ಪ್ರಕಾರ ನಡೆಯದೆ ಹೋದರೆ ಮಕ್ಕಳು ಪೋಷಕರ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಇದೇ ಮುಂದುವರೆದು ಅಪ್ಪ ಅಮ್ಮನ ಯಾವ ಮಾತನ್ನೂ ಮಕ್ಕಳು ನಂಬದೇ ಹೋಗಬಹುದು. ಅಥವಾ ಸುಳ್ಳು ಹೇಳುವ ಅಭ್ಯಾಸ ಬೆಳೆಸಿಕೊಳ್ಳಬಹುದು.
ಹಾಗಾಗಿ ಮಕ್ಕಳು ನಿಮ್ಮ ಮುಂದೆ ಇಡುವ ಬೇಡಿಕೆಯನ್ನು ಕೇಳಿದಾಗ ಆ ಕ್ಷಣ ಸರಿಯಾಗಿ ಸ್ಪಂದಿಸಿ. ಸುಳ್ಳು ಭರವಸೆಗಳನ್ನು ಕೊಡಬೇಡಿ. ಪ್ರೀತಿಯಿಂದ ತಿಳಿಹೇಳಿ, ಅವಕಾಶ ಸಿಕ್ಕಾಗ ಮಕ್ಕಳ ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸುವಲ್ಲಿ ಗಮನ ಕೊಡಿ.