ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲಿನಿಂದಲೂ ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದಾರೆ. ಇಷ್ಟು ದಿನ ಇಲ್ಲದ ವಿಚಾರವನ್ನು ಈಗ ಅನಗತ್ಯವಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ವಿಷಬೀಜ ಬಿತ್ತಿ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಿಜಾಬ್ ಹಾಕುವುದು ಅವರ ಹಕ್ಕು. ಇದನ್ನು ಸರ್ಕಾರ ಸರಳವಾಗಿ ತೆಗೆದುಕೊಂಡಿತ್ತು. ಇದೀಗ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವುದರಿಂದ ತೀರ್ಪು ಏನು ಬರುತ್ತೆ ಕಾದುನೋಡೋಣ ಎಂದರು.
ತನಿಖೆ ನಂತ್ರ ಹಿಜಾಬ್ ವಿವಾದದ ಹಿಂದಿನ ಸತ್ಯಾಂಶ ಬಯಲು: ಬಿ.ಸಿ. ನಾಗೇಶ್
ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ರಾಮ ಮಂದಿರವೇ ಬೇರೆ, ಹಿಜಾಬ್ ವಿಚಾರವೇ ಬೇರೆ. ರಾಮ ಮಂದಿರ ತೀರ್ಪು ಬಂದಾಗ ನಾವು ಸ್ವಾಗತ ಮಾಡಿದೆವು. ಈಗ ಹಿಜಾಬ್ ವಿಚಾರವನ್ನು ವಿವಾದ ಮಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವ ವಿಚಾರವಾಗಿ ಮಾತನಾಡಿದ ಜಮೀರ್ ಅಹ್ಮದ್, ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲಿಯೇ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ಹತ್ತು ದಿನಗಳ ಹಿಂದೆ ಬೇಜಾರಾಗಿ ಹಾಗೆ ಹೇಳಿದ್ದರು ಅಷ್ಟೇ. ಸಿದ್ದರಾಮಯ್ಯ ಅವರನ್ನು ಬಿಟ್ಟು ಅವರು ಎಲ್ಲೂ ಹೋಗಲ್ಲ. ನನಗೆ ಇಬ್ರಾಹಿಂ ಅವರೇ ನಾಯಕರು ಎಂದರು.