ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ನಿದ್ರಾಹೀನತೆಯೂ ಹೆಚ್ಚುತ್ತಿದೆ ಎಂದಿದೆ ಸಂಶೋಧನೆಗಳು. ಇದನ್ನು ಸರಿಪಡಿಸುವ ಜವಾಬ್ದಾರಿ ಪೋಷಕರದ್ದು, ಹೇಗೆಂದಿರಾ?
ಮಕ್ಕಳನ್ನು ಸರಿಯಾದ ಸಮಯಕ್ಕೆ ಎಬ್ಬಿಸುವ ಮತ್ತು ಮಲಗಿಸುವ ಜವಾಬ್ದಾರಿಯನ್ನು ನೀವು ಹೊತ್ತುಕೊಳ್ಳಿ. ತಡರಾತ್ರಿಯವರೆಗೆ ಟಿವಿ ಅಥವಾ ಮೊಬೈಲ್ ನೋಡುತ್ತಾ ಕೂರುವುದನ್ನು ನಿಲ್ಲಿಸಿ. ಮೊಬೈಲ್ ಹೆಚ್ಚು ಬಳಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮನ ಮುಟ್ಟವಂತೆ ಹೇಳಿ. ನಿಗದಿತ ಸಮಯಕ್ಕೆ ಎಬ್ಬಿಸಿ ಅವರನ್ನು ಚಟುವಟಿಕೆಯನ್ನು ತೊಡಗಿಕೊಳ್ಳುವಂತೆ ಮಾಡಿ.
ಮಲಗುವ ಕೋಣೆಯಲ್ಲಿ ಕಂಪ್ಯೂಟರ್, ಮೊಬೈಲ್ ಇಡದಿರಿ. ಮಲಗುವ ಮುನ್ನ ಮಕ್ಕಳ ಹೊಟ್ಟೆ ತುಂಬಿರಲಿ. ಹೆಚ್ಚು ನೀರು ಕುಡಿಯುವುದು ಬೇಡ. ಮಕ್ಕಳಿಗೆ ಮಲಗುವ ಮುನ್ನ ನೀತಿ ಕತೆಗಳನ್ನು ಹೇಳುವ ಅಭ್ಯಾಸ ರೂಢಿಸಿಕೊಳ್ಳಿ.
ಮಲಗುವ ಕೋಣೆಯನ್ನು ಸ್ವಚ್ಛವಾಗಿಡಿ. ಅವರಿಗಿಷ್ಟದ ಬಣ್ಣದ ಬೆಡ್ ಶೀಟ್ ಆಯ್ಕೆ ಮಾಡಿ. ಇಷ್ಟದ ಗೊಂಬೆಗಳಿದ್ದರೆ ಜೊತೆಯಲ್ಲಿ ಇಟ್ಟುಕೊಳ್ಳಲು ಬಿಡಿ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಅವರ ಬೇಕು ಬೇಡಗಳನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳಿ.