ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದ್ರೆ ಮಕ್ಕಳನ್ನು ಪ್ರಿ-ಸ್ಕೂಲ್, ಪ್ಲೇ ಸ್ಕೂಲ್ ಎಂದು ಕರೆಯಲ್ಪಡುವ ನರ್ಸರಿ ಸ್ಕೂಲ್ ಗೆ ಕಳುಹಿಸುವುದು ಸಾಮಾನ್ಯ. ಮಕ್ಕಳು ಬೇಗ ಶಾಲೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಲಿ ಎನ್ನುವ ಕಾರಣಕ್ಕೂ ಮಕ್ಕಳನ್ನು ಈ ಶಾಲೆಗೆ ಸೇರಿಸಲಾಗುತ್ತದೆ.
ಮಕ್ಕಳ ಭವಿಷ್ಯಕ್ಕೆ ಈ ಶಾಲೆಗಳು ಅಡಿಪಾಯವಾಗುತ್ತವೆ. ಹಾಗಾಗಿ ಮಕ್ಕಳನ್ನು ನರ್ಸರಿಗೆ ಸೇರಿಸುವ ಮೊದಲು ಕೆಲವೊಂದನ್ನು ಅವಶ್ಯಕವಾಗಿ ತಿಳಿದುಕೊಳ್ಳಿ.
ನಿಮ್ಮ ಮಗು ಹೋಗುವ ಶಾಲೆಯಲ್ಲಿ ಒಳ್ಳೆ ಶಿಕ್ಷಣ ಪಡೆದ ಶಿಕ್ಷಕರು ಇದ್ದಾರಾ ಎಂಬುದನ್ನು ಪರೀಕ್ಷೆ ಮಾಡಿ. ಉತ್ತಮ ಶಿಕ್ಷಣ ಪಡೆದ ಶಿಕ್ಷಕರು ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಬಲ್ಲರು. ಜೊತೆಗೆ ಮಕ್ಕಳಿಗೆ ಶಿಸ್ತನ್ನು ಕಲಿಸುತ್ತಾರೆ.
ಕಾಳಜಿಯುಳ್ಳ, ಸಕಾರಾತ್ಮಕವಾಗಿ ಆಲೋಚನೆ ಮಾಡುವ ಹಾಗೂ ವಿಶ್ವಾಸಾರ್ಹ ಶಿಕ್ಷಕರು ಶಾಲೆಯಲ್ಲಿ ಇದ್ದಾರಾ ಎಂಬುದನ್ನು ದೃಢಪಡಿಸಿಕೊಳ್ಳಿ. ಇಂಥ ಶಿಕ್ಷಕರಿರುವ ಶಾಲೆಯಲ್ಲಿ ಮಕ್ಕಳು ಬೇಗ ಕಲಿಯುತ್ತಾರೆ. ಮಕ್ಕಳಿಗೆ ಮರೆಯುವ ಖಾಯಿಲೆ ಕಾಡುವುದಿಲ್ಲ. ಮಕ್ಕಳು ಸದಾ ಉತ್ಸಾಹದಲ್ಲಿರುತ್ತಾರೆ. ಮಕ್ಕಳಿಗೆ ಆಟದ ಜೊತೆ ಪಾಠ ಕಲಿಸುತ್ತಾರೆ. ಮಕ್ಕಳಿಗೆ ಬೈದು, ಹೊಡೆದು ಬೆದರಿಸುವ ಬದಲು ಪ್ರೀತಿಯಿಂದ ತಪ್ಪನ್ನು ತಿದ್ದುತ್ತಾರೆ. ಕಷ್ಟ ಬಂದಾಗ ಎದ್ದು ನಿಲ್ಲುವುದನ್ನು ಕಲಿಸುತ್ತಾರೆ.
ಶಿಕ್ಷಕರು ಮಕ್ಕಳ ಜೊತೆ ಬೆರೆಯುತ್ತಾರಾ ಎಂಬುದನ್ನು ನೋಡಬೇಕು. ನಿಮ್ಮ ಮಗು ನಾಚಿಕೆ ಸ್ವಭಾವದ್ದಾಗಿದ್ದರೆ ಶಿಕ್ಷಕರು ಅವರನ್ನು ಮಾತನಾಡಿಸಲು ಯತ್ನಿಸುತ್ತಾರಾ? ಕಥೆ ಹೇಳುತ್ತಾರಾ? ಒಳ್ಳೆ ವಿಷ್ಯ ಕಲಿಸುತ್ತಾರಾ ಎಂಬುದನ್ನು ಪರೀಕ್ಷೆ ಮಾಡಿ. ಒಂದು ವಾರದಲ್ಲಿ ನಿಮಗೆ ಫಲಿತಾಂಶ ಗೊತ್ತಾಗುತ್ತದೆ.