ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಿ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು ಎಂಬುದು ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಆದರೆ ಅದು ಹೇಗೆ ಎಂಬ ಗೊಂದಲದಲ್ಲೇ ಕಳೆದುಬಿಡುತ್ತಾರೆ. ಇದಕ್ಕೆ ಒಂದಿಷ್ಟು ಸಲಹೆಗಳು ಇಲ್ಲಿವೆ ಕೇಳಿ.
ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ನಿರ್ಧರಿಸುವ ಸ್ವಾತಂತ್ರ್ಯ ಕೊಡಿ. ವಯಸ್ಸಿಗೆ ಸರಿಯಾಗಿ ತಮ್ಮ ಬಗ್ಗೆ ತಾವೇ ಯೋಚಿಸಲು ಬಿಡಿ. ಆಗ ಅವರಿಗೆ ಜವಾಬ್ದಾರಿಯೂ ಮೂಡುತ್ತದೆ.
ಇದರರ್ಥ ಅವರಿಗಿಷ್ಟ ಬಂದಂತೆ ಅವರನ್ನು ಬಿಡುವುದಲ್ಲ. ಸಣ್ಣ ಪುಟ್ಟ ವಿಷಯಗಳನ್ನು ಅವರಿಗೆ ನಿರ್ಧರಿಸಲು ಬಿಡಿ. ಡ್ರಾಯಿಂಗ್ ಮಾಡುವಾಗ ಅವರಿಗಿಷ್ಟ ಬಂದ ಬಣ್ಣವನ್ನು ತುಂಬುವಂತೆ ಹೇಳಿ. ಬಳಿಕ ಇನ್ನೊಂದು ಚಿತ್ರ ಮಾಡಿ, ಬೇರೆ ಬಣ್ಣ ತುಂಬಿದ್ದರೆ ಏನು ವ್ಯತ್ಯಾಸವಾಗುತ್ತಿತ್ತು ಎಂಬುದು ವಿವರಿಸಿ ಹೇಳಿ.
ಟಿವಿ, ಮೊಬೈಲ್ ನೋಡಲು ಟೈಂ ಕೊಡುವಂತೆ, ಹೋಮ್ ವರ್ಕ್ ಗೆ ಸಮಯ ಮೀಸಲಿಡುವಂತೆ ಆಟಕ್ಕೂ ಅವರಿಗಿಷ್ಟ ಬಂದುದ್ದನ್ನು ಮಾಡಲೂ ಸಮಯವಿಡಿ. ಮಕ್ಕಳು ತಪ್ಪು ಮಾಡುವುದು ಸಹಜ. ಹಾಗೆಂದು ಸೋಲಿನಿಂದ ಅವರನ್ನು ಕಂಗೆಡಿಸಬೇಡಿ. ಮತ್ತೆ ಹೊಸ ನಿರ್ಧಾರಗಳನ್ನು ಕೈಗೊಳ್ಳಲು ಪ್ರೋತ್ಸಾಹ ನೀಡಿ.
ಪೋಷಕರು ತಾಳ್ಮೆ ವಹಿಸುವುದು ಬಹಳ ಮುಖ್ಯ. ತುಸು ನಿಧಾನವಾದರೂ ಸರಿ, ಅವರ ಕೆಲಸ ಅವರೇ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿ.