ಮಂಡ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿದ್ದ ಹನಿಟ್ರ್ಯಾಪ್ ಕೇಸ್ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ದಿನಕ್ಕೊಂದು ತಿರುವು ಪಡೆಯುತ್ತಿರೋ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ತಾ ಇದೆ. ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡನನ್ನ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಾರೆ ಎನ್ನಲಾಗಿತ್ತು. ಈ ನಡುವೆ ಆಡಿಯೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಲ್ಲದೆ ಯಾವುದು ಸತ್ಯ? ಯಾವುದು ಸುಳ್ಳು ? ಎಂಬ ಚರ್ಚೆಗೂ ಕಾರಣವಾಗಿದೆ. ಅಷ್ಟೆ ಅಲ್ಲ ಜಗನ್ನಾಥ್ ಶೆಟ್ಟಿ ದೂರು ಸುಳ್ಳು ಹಾಗೂ ವಿಡಿಯೋದಲ್ಲಿ ಇರುವುದೂ ಸುಳ್ಳು ಎಂದು ಹೇಳಲಾಗುತ್ತಿದೆ.
ಹೌದು, ಆಗಸ್ಟ್ 19ರಂದು ಮಂಡ್ಯದ ಶ್ರೀನಿಧಿ ಗೋಲ್ಡ್ ಮಾಲೀಕ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಹನಿಟ್ರ್ಯಾಪ್ ದೂರು ನೀಡಿದ್ರು. ಇನ್ನು ಜಗನ್ನಾಥ್ ಶೆಟ್ಟಿ ಯುವತಿಯೊಬ್ಬಳ ಜತೆ ಮಾತನಾಡಿರೊ ಆಡಿಯೋ ವೈರಲ್ ಆಗಿದ್ದು, ತಾನು ಲೆಕ್ಚರರ್ ಎಂದು ನಂಬಿಸಿ ಲಾಡ್ಜ್ ಗೆ ಆಹ್ವಾನ ನೀಡಿದ್ದಾನೆ.
ಶನಿವಾರ ನೈಟ್ ಬನ್ನಿ, ಸೋಮವಾರ ಬೆಳಿಗ್ಗೆ ವಾಪಸ್ ಆಗೋಣ. ಶನಿವಾರ, ಭಾನುವಾರ ಲಾಡ್ಜ್ ನಲ್ಲೇ ಇರೋಣ. ಶನಿವಾರ ನೈಟ್ 9 ಗಂಟೆ ವೇಳೆಗೆ ಮೈಸೂರಿಗೆ ಬರ್ತೀನಿ ಅಂತ ಹೇಳಿದ್ದಾನೆ. ಇನ್ನು ವೈರಲ್ ವಿಡಿಯೋ ಪ್ರಕಾರ ಯುವತಿ ಜತೆ ರೂಂಗೆ ಹೋದ ಕೆಲವೇ ನಿಮಿಷದಲ್ಲಿ ಸಲ್ಮಾಭಾನು ಹಾಗೂ ಆಕೆಯ ಸಹಚರರು ಎಂಟ್ರಿ ಕೊಟ್ಟಿದ್ದು, ಜಗನ್ನಾಥ್ ಶೆಟ್ಟಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಜಗನ್ನಾಥ್ ಶೆಟ್ಟಿ ತಪ್ಪಾಗೋಯ್ತು ಅಂತ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.
ಸದ್ಯ ಆಡಿಯೋ ಹಾಗೂ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಜಗನ್ನಾಥ್ ಶೆಟ್ಟಿ ಕಂಪ್ಲೇಂಟ್ ಕೊಡುವಾಗ ಸುಳ್ಳು ಹೇಳಿರೋದು ಸ್ಪಷ್ಟವಾಗಿದೆ. ಯುವತಿಯ ಪರಿಚಯ ಮೊದಲೇ ಇದ್ದು, ಜಗನ್ನಾಥ್ ಶೆಟ್ಟಿಯೇ ರೂಂಗೆ ಕರೆದೊಯ್ದಿದ್ದಾರೆ. ಹಾಗಂತ ಇದು ಹನಿಟ್ರ್ಯಾಪ್ ಅಲ್ಲ ಅಂತಲ್ಲ. ಟ್ರ್ಯಾಪ್ ಮಾಡೋದ್ರ ಹಿಂದೆ ಯುವತಿಯೂ ಕೈಜೋಡಿಸಿರೊ ಅನುಮಾನವಿದೆ. ಸದ್ಯ ಮತ್ತೊಬ್ಬ ಪ್ರಮುಖ ಆರೋಪಿಯನ್ನ ವಶಕ್ಕೆ ಪಡೆದಿರೊ ಪೊಲೀಸರು ವಿಚಾರಣೆಯನ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ.