ಮಂಗಳೂರು ಶೈಲಿ ಚಿಕನ್ ಸುಕ್ಕಾ ತಿನ್ನುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಇದರ ಮಸಾಲೆಯ ಘಮ ಕೂಡ ಬಾಯಲ್ಲಿ ನೀರೂರಿಸುತ್ತದೆ. ಹಾಗೂ ತೆಂಗಿನಕಾಯಿ ಬಳಸಿ ಇದನ್ನು ಮಾಡುವುದರಿಂದ ತಿನ್ನುವುದಕ್ಕೆ ಬಹಳ ರುಚಿಕರವಾಗಿರುತ್ತದೆ.
ಸುಲಭವಾಗಿ ಮಂಗಳೂರು ಶೈಲಿಯ ಚಿಕನ್ ಸುಕ್ಕಾ ಮಾಡುವ ವಿಧಾನ ಇಲ್ಲಿದೆ ನೋಡಿ.
ಸಾಮಾಗ್ರಿಗಳು: ಚಿಕನ್-1 ಕೆ.ಜಿ, ಈರುಳ್ಳಿ-2 ಉದ್ದಕ್ಕೆ ಹೆಚ್ಚಿಟ್ಟುಕೊಂಡಿದ್ದು, ಏಲಕ್ಕಿ-2, 1 ಟೀ ಸ್ಪೂನ್-ಉಪ್ಪು, 1 ಟೇಬಲ್ ಸ್ಪೂನ್-ಎಣ್ಣೆ. ಮಸಾಲೆಗೆ ಬೇಕಾಗುವ ಸಾಮಗ್ರಿಗಳು: ತೆಂಗಿನಕಾಯಿ ತುರಿ-1/2 ಕಪ್, 2 ಟೇಬಲ್ ಸ್ಪೂನ್-ಕೊತ್ತಂಬರಿಕಾಳು, ¼ ಟೀ ಸ್ಪೂನ್-ಜೀರಿಗೆ, ¼ ಟೀ ಸ್ಪೂನ್ ಸಾಸಿವೆ, 1/2ಟೀ ಸ್ಪೂನ್ ಕಾಳುಮೆಣಸು, 4-ಲವಂಗ, 1 ಚಿಕ್ಕ ತುಂಡು ಚಕ್ಕೆ, 10-ಒಣಮೆಣಸಿನಕಾಯಿ, ¼ ಟೀ ಸ್ಪೂನ್-ಅರಿಶಿನ, 1 ಹದಗಾತ್ರದ ಈರುಳ್ಳಿ, 4-5 ಬೆಳ್ಳುಳ್ಳಿ ಎಸಳು, 1-ಚಿಕ್ಕ ತುಂಡು ಶುಂಠಿ, 1 ಟೀ ಸ್ಪೂನ್ ಉಪ್ಪು.
ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಸು ಎಣ್ಣೆ ಹಾಕಿ ಕೊತ್ತಂಬರಿಕಾಳು, ಜೀರಿಗೆ, ಸಾಸಿವೆ, ಕಾಳುಮೆಣಸು, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಮೆಣಸನ್ನು ಹುರಿದುಕೊಳ್ಳಿ. ಇವಿಷ್ಟನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಚಿಟಿಕೆ ಅರಿಶಿನ, ಒಂದು ಸಣ್ಣತುಂಡು ಹುಣಸೇಹಣ್ಣು, ತೆಂಗಿನತುರಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ನಂತರ ಒಂದು ಅಗಲವಾದ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಆಮೇಲೆ ಅದ್ದಕ್ಕೆ ಕತ್ತರಿಸಿಟ್ಟುಕೊಂಡ ಈರುಳ್ಳಿ, 2 ಏಲಕ್ಕಿ ಸೇರಿಸಿ ಹುರಿದುಕೊಳ್ಳಿ. ನಂತರ ಇದಕ್ಕೆ ಚಿಕನ್ ಸೇರಿಸಿ ಸ್ವಲ್ಪ ಉಪ್ಪು ಸೇರಿಸಿ ಬೇಯಲು ಬಿಡಿ. ಚಿಕನ್ ನೀರು ಬಿಟ್ಟುಕೊಳ್ಳುತ್ತಿದ್ದಂತೆ ರುಬ್ಬಿಟ್ಟುಕೊಂಡ ಮಸಾಲ ಸೇರಿಸಿ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಕರವಾದ ಚಿಕನ್ ಸುಕ್ಕಾ ರೆಡಿ.