
ಈ ಹಿಂದೆ ಭಯೋತ್ಪಾದನಾ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಇಬ್ಬರು ಆರೋಪಿಗಳು ಸಹ ಶಿವಮೊಗ್ಗ ಜಿಲ್ಲೆಯ ನಂಟು ಹೊಂದಿದ್ದು ಬಹಿರಂಗವಾಗಿತ್ತು. ಇವರು ಬಾಂಬ್ ತಯಾರಿಸಿ ಅದರ ರಿಹರ್ಸಲ್ ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೇ ಮಾಡಿದ್ದು ತಿಳಿದು ಬಂದಿತ್ತು. ಇದರ ಮಧ್ಯೆ ಈಗ ಶಿವಮೊಗ್ಗ ಜಿಲ್ಲಾ ಪೊಲೀಸರು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.
ಸಾರ್ವಜನಿಕರು ತಮ್ಮ ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ ಬಾಡಿಗೆದಾರರ ಪೂರ್ವಾಪರವನ್ನು ಪರಿಶೀಲಿಸಿ, ಅವರುಗಳ ಮಾಹಿತಿಯನ್ನು ಖಚಿತಪಡಿಸಿಕೊಂಡ ನಂತರವೇ ಬಾಡಿಗೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಹೊಸದಾಗಿ ತಮ್ಮ ಏರಿಯಾದಲ್ಲಿ ಮನೆಯನ್ನು ಬಾಡಿಗೆ ಕೇಳಿಕೊಂಡು ಬಂದ ಸಂದರ್ಭದಲ್ಲಿ ಅಥವಾ ವಾಸವಾಗಿದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ಅಥವಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.