ಭ್ರಷ್ಟಾಚಾರವು ” ಗೆದ್ದಲಿನಂತೆ” ಇದು ದೇಶವನ್ನು ಟೊಳ್ಳು ಮಾಡುತ್ತದೆ. ಹೀಗಾಗಿ ಆದಷ್ಟು ಬೇಗ ಭಾರತದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ದೇಶದ ಎಲ್ಲಾ ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಗಾಂಧಿಜೀಯವರ ಪುಣ್ಯತಿಥಿಯಂದು ತಮ್ಮ ಮೊದಲ ಮನ್ ಕಿ ಬಾತ್ ರೇಡಿಯೋ ಪ್ರಸಾರ ನಡೆಸಿರುವ ಮೋದಿಯವರು, ಈ ಹಿಂದೆ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದರು.
ಈ ಬಾರಿ ದೇಶದ ಹಲವು ಭಾಗಗಳಿಂದ ಹಾಗೂ ವಿದೇಶಗಳಿಂದ ಒಂದು ಕೋಟಿಗೂ ಅಧಿಕ ಮಕ್ಕಳು, ಪೋಸ್ಟ್‌ಕಾರ್ಡ್‌ಗಳ ಮೂಲಕ , “ತಮ್ಮ ಮನ್ ಕಿ ಬಾತ್” ಅನ್ನು ಮೋದಿಗೆ ಕಳುಹಿಸಿದ್ದಾರೆ. ಮಕ್ಕಳ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಯವರು, ಈ ಪೋಸ್ಟ್‌ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯಕ್ಕಾಗಿ ಹೊಸ ಪೀಳಿಗೆಯ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದು ಹೇಳಿದ್ದಾರೆ.
2047ರ ವೇಳೆಗೆ ಭ್ರಷ್ಟಾಚಾರ ಮುಕ್ತ ಭಾರತವನ್ನು ಕಾಣಬೇಕು ಎಂದು ಉತ್ತರ ಪ್ರದೇಶದ ಬಾಲಕಿಯೊಬ್ಬಳು ಕಳುಹಿಸಿದ ಪೋಸ್ಟ್‌ಕಾರ್ಡ್ ಕುರಿತು ಮಾತನಾಡಿರುವ ಮೋದಿ, “ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದೀರಿ, ಭ್ರಷ್ಟಾಚಾರವು ದೇಶವನ್ನು ಟೊಳ್ಳಾಗಿಸುವ ಗೆದ್ದಲು. ಇದನ್ನ ಹೋಗಲಾಡಿಸಲು 2047 ರವರೆಗೆ ನಿರೀಕ್ಷಿಸುವುದು ಅಥವಾ ಕಾಯುವುದು ಏಕೆ ? ಭ್ರಷ್ಟಾಚಾರವನ್ನು ಹೋಗಲಾಡಿಸಲು ಇಂದಿನಿಂದಲೆ ಕೆಲಸ ಮಾಡಬೇಕು. ದೇಶದ ಎಲ್ಲಾ ಜನರು, ಇಂದಿನ ಯುವಕರು ಒಟ್ಟಾಗಿ ಆದಷ್ಟು ಬೇಗ ಭ್ರಷ್ಟಾಚಾರವನ್ನು ಇಲ್ಲವಾಗಿಸಬೇಕು ಎಂದಿದ್ದಾರೆ.
ಇದು ಸಾಧ್ಯವಾಗಬೇಕೆಂದರೆ, ನಾವು ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗುತ್ತದೆ. ಕರ್ತವ್ಯ ಪ್ರಜ್ಞೆ ಇರುವಲ್ಲಿ, ಕರ್ತವ್ಯವು ಸರ್ವೋಚ್ಚವಾಗಿರುವಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.