ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ವಿಧೇಯಕಕ್ಕೆ ಜೆಡಿಎಸ್ ಬೆಂಬಲ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಭೂ ಸುಧಾರಣ ತಿದ್ದುಪಡಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದು, ರೈತರ ಪ್ರತಿಭಟನೆಗೆ ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಇದೇ ಸಂದರ್ಭದಲ್ಲಿ ವಿಧಾನಪರಿಷತ್ ನಲ್ಲಿ ಭೂಸುಧಾರಣಾ ತಿದ್ದುಪಡಿ ವಿಧೇಯಕ ಪ್ರಸ್ತಾಪ ಮಾಡಲಾಗಿದ್ದು, ಈ ವೇಳೆ ಕೂಡ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಮತಕ್ಕೆ ಹಾಕಿದಾಗ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.
ಭೂ ಸುಧಾರಣಾ ವಿಧೇಯಕದ ಪರವಾಗಿ 37 ಮತಗಳು ಹಾಗೂ ವಿರುದ್ಧವಾಗಿ 21 ಮತಗಳು ಚಲಾವಣೆಯಾಗಿವೆ. ಜೆಡಿಎಸ್ ಬೆಂಬಲ ನೀಡಿದ್ದಕ್ಕೆ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಒಟ್ಟಾರೆ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲೂ ಅಂಗೀಕಾರ ಸಿಕ್ಕಿದೆ.