ಶ್ರೀನಗರ: ಸ್ನೋಫಾಲ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಉತ್ತರ ಭಾರತದ ಹಲವೆಡೆ ಮಂಜಿನ ಮಳೆ ಕಡಿಮೆಯಾಗುತ್ತಾ ಬರುತ್ತಿರುವ ಕಾಲವಿದು. ಸ್ನೋಫಾಲ್ ಬೀಳುತ್ತಿರುವಾಗ ಪ್ರವಾಸಿಗರ ದಂಡು ಮೋಜು-ಮಸ್ತಿಯಲ್ಲಿ ತೊಡಗುತ್ತಾರೆ. ಸ್ನೋಫಾಲ್ ನ ಫೋಟೋ, ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಹಿಮಪಾತವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಶುಕ್ರವಾರ ಮಧ್ಯಾಹ್ನ ಆರಂಭವಾದ ಮಂಜಿನ ಮಳೆ ಹಲವು ಗಿರಿಧಾಮಗಳಲ್ಲಿ ಮುಂದುವರಿದಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಜಿನಿಂದ ಆವೃತವಾದ ಶ್ರೀನಗರ ರೈಲು ನಿಲ್ದಾಣದ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಭೂಮಿಯ ಮೇಲೆ ಸ್ವರ್ಗವಿದ್ದರೆ, ಅದು ಇಲ್ಲಿದೆ ಎಂದು ಶೀರ್ಷಿಕೆ ನೀಡಿ ಫೋಟೋ ಶೇರ್ ಮಾಡಿದ್ದಾರೆ. ಈ ಚಿತ್ರಗಳು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ.
ಈ ಫೋಟೋ ನೋಡಿದ ನಂತರ ಈ ಸ್ಥಳಕ್ಕೆ ಭೇಟಿ ನೀಡಲು ಬಯಸುವುದಾಗಿ ಬಳಕೆದಾರನೊಬ್ಬ ಹೇಳಿದ್ದಾನೆ. ಶ್ರೀನಗರ ರೈಲು ನಿಲ್ದಾಣವು ಸ್ವಿಟ್ಜರ್ಲೆಂಡ್ ಅಥವಾ ಇತರೆ ಯುರೋಪ್ ದೇಶದ ರೈಲು ನಿಲ್ದಾಣದಂತೆ ಗೋಚರಿಸುತ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಕಾಶ್ಮೀರ ಕಣಿವೆಯು ಪ್ರಸ್ತುತ ಚಿಲ್ಲಾ-ಎ-ಕಲನ್ ನ ಅವಧಿಯಾಗಿದೆ. ಇದು ಡಿಸೆಂಬರ್ 21 ರಂದು ಪ್ರಾರಂಭವಾಗುವ 40 ದಿನಗಳ ಕಠಿಣ ಚಳಿಗಾಲದ ಅವಧಿಯಾಗಿದೆ. ಈ ಅವಧಿಯಲ್ಲಿ ತಾಪಮಾನವು ಗಣನೀಯವಾಗಿ ಕುಸಿಯುತ್ತದೆ. ದಾಲ್ ಸರೋವರ ಮತ್ತು ಕಾಶ್ಮೀರ ಕಣಿವೆಯ ಹಲವು ಭಾಗಗಳಲ್ಲಿ ನೀರು ಸರಬರಾಜು ಮಾರ್ಗಗಳು ಸೇರಿದಂತೆ ಇಲ್ಲಿನ ಜಲಮೂಲಗಳನ್ನು ಘನೀಕರಿಸುತ್ತದೆ. ಜನವರಿ 31ರಂದು ಚಿಲ್ಲಾ-ಎ-ಕಲನ್ ಅವಧಿ ಕೊನೆಗೊಳ್ಳಲಿದೆ.