ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭೂಮಿ ನಡುಗುತ್ತಿರುವ ಅನುಭವ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ಊರು ತೊರೆಯುತ್ತಿದ್ದಾರೆ ಎನ್ನಲಾಗಿದೆ.
ಬುಧವಾರ ತಾಲೂಕಿನ ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪನದಲ್ಲಿ 2.9ರಷ್ಟು ಭೂಕಂಪನ ಸಂಭವಿಸಿದ್ದು, ಮಂಡಿಕಲ್ಲು ಗ್ರಾಮದ ಸುತ್ತಮುತ್ತ ರಿಕ್ಟರ್ ಮಾಪನದಲ್ಲಿ 3.0ರಷ್ಟು ಭೂಕಂಪನ ಸಂಭವಿಸಿತ್ತು.
ಈ ಭೂಕಂಪನ ಕ್ರಮವಾಗಿ 1.23 ಕಿ.ಮೀ ಹಾಗೂ 1.4 ಕಿ.ಮೀ ವ್ಯಾಪ್ತಿಯಲ್ಲಿ ಸಂಭವಿಸಿತ್ತು. ಗುರುವಾರವೂ ತಾಲೂಕಿನ ಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.6 ರಷ್ಟು ಭೂಕಂಪ ದಾಖಲಾಗಿತ್ತು. ಇದರಿಂದಾಗಿ ಜನರು ಭಯ ಭೀತರಾಗಿದ್ದರು.
ಸೈಕಲ್ ಏರಿ ಬಂದ ಸಾಂಟಾ..! ಅನಾಥ ಮಕ್ಕಳಿಗೆ ಕ್ರಿಸ್ಮಸ್ ಗಿಫ್ಟ್
ಭೂಕಂಪನದಿಂದಾಗಿ ಈ ಗ್ರಾಮಗಳಲ್ಲಿನ ಹಲವರ ಮನೆಗಳು ಬಿರುಕು ಬಿಟ್ಟಿದ್ದವು. ಮನೆಯಲ್ಲಿದ್ದ ಸಾಮಾನುಗಳ ಏಕಾಏಕಿ ಕೆಳಗೆ ಬೀಳುತ್ತಿದ್ದವು. ತೀರಾ ಹಳೆಯ ಮನೆಗಳು ಕಂಪನದಿಂದಾಗಿ ಉರುಳುವ ಭಯ ಜನರನ್ನು ಕಾಡುತ್ತಿದೆ. ಹೀಗಾಗಿ ಆತಂಕದಲ್ಲಿರುವ ಜನರು ಬೇರೆ ಬೇರೆ ಊರುಗಳತ್ತ ಮುಖ ಮಾಡುತ್ತಿದ್ದಾರೆ.
ಗ್ರಾಮಸ್ಥರು ಊರು ಬಿಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದು ಎಷ್ಟೇ ಧೈರ್ಯ ಹೇಳಿದರೂ ಜನರು ಮಾತ್ರ ತಮ್ಮ ಪಟ್ಟು ಬಿಡುತ್ತಿಲ್ಲ. ತಮ್ಮ ಸರಕು ಸರಂಜಾಮುಗಳನ್ನು ಕಟ್ಟಿಕೊಂಡು ಊರು ಬಿಡುತ್ತಿದ್ದಾರೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದಿವೆ ಎನ್ನಲಾಗುತ್ತಿದೆ.