
ಆಂಧ್ರಪ್ರದೇಶದ, ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವೊಂದು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ 365 ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ವರ್ಷದ 365 ದಿನಗಳನ್ನು ಪರಿಗಣಿಸಿ 365 ವಿಧದ ಆಹಾರವನ್ನು ವ್ಯವಸ್ಥೆಗೊಳಿಸಲಾಗಿದೆ, ಇದು ನಾವು ನಮ್ಮ ಭಾವಿ ಅಳಿಯನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
ಈ ಭರ್ಜರಿ ಭೋಜನ ಏರ್ಪಡಿಸಿದ್ದು, ತುಮ್ಮಲಪಲ್ಲಿ ಸುಬ್ರಹ್ಮಣ್ಯಂ ಮತ್ತು ಅನ್ನಪೂರ್ಣ ಅವರ ಮಗ ಸಾಯಿಕೃಷ್ಣ ಅವರಿಗಾಗಿ. ಸಾಯಿಕೃಷ್ಣ ಅವ್ರ ಸಂಬಂಧವನ್ನ ಚಿನ್ನದ ವ್ಯಾಪಾರಿ ಆಟಂ ವೆಂಕಟೇಶ್ವರ ರಾವ್ ಮತ್ತು ಮಾಧವಿ ಅವರ ಪುತ್ರಿ ಕುಂದವಿಯೊಂದಿಗೆ ನಿಶ್ಚಯಿಸಲಾಗಿದೆ. ಹಬ್ಬದ ನಂತರ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಮದುವೆಗೂ ಮುನ್ನ ಹಬ್ಬ ಬಂದಿದ್ದರಿಂದ ವಧುವಿನ ಅಜ್ಜ ಅಚಂತ ಗೋವಿಂದ್ ಹಾಗೂ ಅಜ್ಜಿ ನಾಗಮಣಿ ಮೊಮ್ಮಗಳ ಪತಿಯಾಗುವ ಇವರಿಗೆ ಈ ಭರ್ಜರಿ ಸತ್ಕಾರದ ವ್ಯವಸ್ಥೆ ಮಾಡಿದ್ದರು. ಈ ಸತ್ಕಾರ ಒಂದು ರೀತಿ ಅದ್ಧೂರಿಯಾಗಿ ನಡೆದಿರುವ ವಿವಾಹ ಪೂರ್ವ ಆರತಕ್ಷತೆಯಂತಾಗಿದೆ. ಈ ಕಾರ್ಯಕ್ರಮದಲ್ಲಿ ವಧು ಮತ್ತು ವರನ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕಾಗಿ 30 ವಿವಿಧ ಬಗೆಯ ಕರ್ರಿ, ಅನ್ನ, ಪುಳಿಯೋಗರೆ, ಬಿರಿಯಾನಿ, ಗೋದಾವರಿಯ ಸಾಂಪ್ರದಾಯಿಕ ಸಿಹಿತಿಂಡಿಗಳು, ಬಿಸಿ ಮತ್ತು ತಂಪು ಪಾನೀಯಗಳು, ಬಿಸ್ಕತ್‌ಗಳು, ಹಣ್ಣುಗಳು, ಕೇಕ್ ಗಳನ್ನ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮವು ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಚರ್ಚಾ ವಿಷಯವಾಗಿದೆ. ಪಶ್ಚಿಮ ಹಾಗೂ ಪೂರ್ವ, ಎರಡು ಗೋದಾವರಿ ಜಿಲ್ಲೆಗಳು ತಮ್ಮ ಆತ್ಮೀಯ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನವರು ಅತಿಥಿಗಳನ್ನು ಅತ್ಯಂತ ಬದ್ಧತೆಯಿಂದ ನೋಡಿಕೊಳ್ಳುತ್ತಾರೆ ಎಂಬ ಕೀರ್ತಿ ಇದೆ.