ಮಂಡ್ಯ: ಇನ್ಮುಂದೆ ನಾನು ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ಕಟುಕ ಹೃದಯದವನು ನಾನಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜನರ ಕಷ್ಟವನ್ನು ನೋಡಿದಾಗ, ಭಾವನಾತ್ಮಕ ವಿಚಾರಕ್ಕೆ ಹೃದಯ ಮಿಡಿಯುತ್ತೆ. ಆದರೆ ಕೆಲವರು ಅದನ್ನು ಗ್ಲೀಸರಿನ್ ಹಚ್ಚಿ ಕುಮಾರಸ್ವಾಮಿ ಕಣ್ಣೀರ ನಾಟಕವಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಇನ್ಮುಂದೆ ನಾನು ಕಣ್ಣೀರು ಹಾಕಬಾರದು ಎಂದುಕೊಂಡಿದ್ದೇನೆ ಎಂದರು.
ಕನಕನಮರಡಿ ಬಸ್ ದುರಂತ ನಡೆಯಿತು. ಅದನ್ನು ನೋಡಿ ಕಣ್ಣೀರು ಬಂತು. ಅದಕ್ಕೂ ಟವಲ್ ನಲ್ಲಿ ಗ್ಲೀಸರಿನ್ ಹಾಕೊಂಡು ಕುಮಾರಸ್ವಾಮಿ ಅಳುತ್ತಾರೆ ಎಂದು ವ್ಯಂಗ್ಯಮಾಡಿದರು. ಆದರೆ ನಾನು ಗ್ಲೀಸರನ್ ಹಚ್ಚಿ ಅಥವಾ ಯಾವುದೇ ನಾಟಕೀಯವಾಗಿ ಕಣ್ಣೀರು ಹಾಕಿಲ್ಲ. ಜನರ ಸಂಕಷ್ಟವನ್ನು ಭಾವನಾತ್ಮಕವಾಗಿ ನೋಡಿದಾಗ ಕಣ್ಣೀರು ಬರುತ್ತೆ ಎಂದು ಹೇಳಿದರು.
ಇನ್ನು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಮೈತ್ರಿ ಮಾಡಿಕೊಳ್ಳುವುದಾಗಿ ಎಲ್ಲಿಯೂ ಹೇಳಿಲ್ಲ. ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ನಮ್ಮ ಸಹಕಾರ ಕೇಳಿದ್ದಾರೆ. ಆದರೆ ನಾವಿನ್ನೂ ಆ ಬಗ್ಗೆ ನಿರ್ಧರಿಸಿಲ್ಲ. ನಾಳೆ ನಡೆಯಲಿರುವ ಪ್ರೆಸ್ ಮೀಟ್ ನಲ್ಲಿ ಈ ಬಗ್ಗೆ ಘೋಷಿಸುವುದಾಗಿ ತಿಳಿಸಿದರು.