ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರೆದಿದ್ದು, ನದಿ, ಹಳ್ಳ ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಮಳೆ ಅಬ್ಬರಕ್ಕೆ ರಸ್ತೆಗಳೇ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲ ನದಿಗಳಂತಾಗಿವೆ. ಈ ನಡುವೆ ಭಾರಿ ಮಳೆಯಿಂದ ತಗ್ಗರ್ಸೆ ಬಳಿ ರಸ್ತೆಯೇ ಕೊಚ್ಚಿ ಹೋಗಿದೆ.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಬಳಿ ಮಳೆ ನೀರಿನ ರಭಸಕ್ಕೆ ರಸ್ತೆ ನೀರುಪಾಲಾಗಿದ್ದು, ರಸ್ತೆ ಕಾಮಗಾರಿ ಮುಗಿದ ಒಂದೆ ಮಳೆಗೆ ಈ ದುಸ್ಥಿತಿ ಎದುರಾಗಿದೆ.
ತಗ್ಗರ್ಸೆ ಯಲ್ಲಿ ರಸ್ತೆ ಕಾಮಗಾರಿ ನಡೆದು ಕೇವಲ ಒಂದು ವರ್ಷವಾಗಿದೆ. ಈ ಬಾರಿಯ ಮಳೆಗೆ ರಸ್ತೆಯೇ ಕೊಚ್ಚಿ ಹೋಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.