ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಗೋವಾ ಸಿಎಂ ಆಯ್ಕೆ ವಿಚಾರಕ್ಕೆ ಇಂದು ಕೊನೆಗೂ ತೆರೆ ಬಿದ್ದಿದೆ.
ಗೋವಾದಲ್ಲಿ ಸಿಎಂ ಆಯ್ಕೆಯನ್ನು ಬಹಳ ಗುಟ್ಟಾಗಿ ಇಟ್ಟಿದ್ದ ಬಿಜೆಪಿ ಹೈಕಮಾಂಡ್ ಇಂದು ತನ್ನ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಮೋದ್ ಸಾವಂತ್ 2ನೇ ಬಾರಿಗೆ ಗೋವಾದ ಸಿಎಂ ಆಗಿ ಅಧಿಕಾರಕ್ಕೇರುವುದು ಧೃಡಪಟ್ಟಿದೆ.
ಈ ಬಾರಿ ಗೋವಾದ ಮಾಜಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸಿಎಂ ಆಗ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬಂದಿತ್ತು. ಆದರೆ ಬಿಜೆಪಿ ಇದೀಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಶಾಸಕಾಂಗ ಪಕ್ಷದ ನಾಯಕನನ್ನಾಗಿ ಪ್ರಮೋದ್ ಸಾವಂತ್ರನ್ನೇ ಆಯ್ಕೆ ಮಾಡಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿಯು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 40 ಸದಸ್ಯರ ಸ್ಥಾನಗಳನ್ನು ಹೊಂದಿರುವ ಗೋವಾದಲ್ಲಿ 20 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಎಂಜಿಪಿಯ ಇಬ್ಬರು ಶಾಸಕರು ಹಾಗೂ ಮೂವರು ಸ್ವತಂತ್ರ ಅಭ್ಯರ್ಥಿಗಳು ಬೆಂಬಲ ಸೂಚಿಸಿದ್ದಾರೆ. ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು 11 ದಿನಗಳ ಬಳಿಕ ಇದೀಗ ಬಿಜೆಪಿಯು ಎಲ್ಲಾ ಕುತೂಹಲಗಳಿಗೆ ಕೇಸರಿ ಪಾಳಯ ತೆರೆ ಎಳೆದಿದೆ.