ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಭಾರತ – ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಕಾರಣ ಪಂದ್ಯ ರದ್ದಾಗಿದೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ನಿರಾಸೆಗೊಂಡಿದ್ದಾರೆ.
ಈ ಪಂದ್ಯ ವೀಕ್ಷಿಸಲು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದು, ಆದರೆ ಪಂದ್ಯ ನಡೆಯದ ಕಾರಣ ವೀಕ್ಷಣೆಯಿಂದ ವಂಚಿತರಾದರು.
ಇದರ ಮಧ್ಯೆ ಕೆ.ಎಸ್.ಸಿ.ಎ. ಮಹತ್ವದ ತೀರ್ಮಾನ ಕೈಗೊಂಡಿದ್ದು ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಶೇಕಡ 50 ರಷ್ಟು ಹಣವನ್ನು ವಾಪಸ್ ನೀಡಲು ನಿರ್ಧರಿಸಲಾಗಿದೆ.
ನಿಯಮದ ಪ್ರಕಾರ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡರೆ ಮಾತ್ರ ಟಿಕೆಟ್ ಹಣ ವಾಪಸ್ ನೀಡಲಾಗುತ್ತಿದ್ದು, ಆದರೆ ಭಾನುವಾರದ ಪಂದ್ಯದಲ್ಲಿ 3.3 ಓವರ್ ಆಟ ನಡೆದಿದ್ದರೂ ಸಹ ಪ್ರೇಕ್ಷಕರಿಗೆ ಶೇಕಡಾ 50ರಷ್ಟು ಹಣ ಸಿಗಲಿದೆ.