ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ’ ಯಾತ್ರೆ ಈಗ ಕರ್ನಾಟಕಕ್ಕೆ ಕಾಲಿಟ್ಟಿದ್ದು, ತಮಿಳುನಾಡಿನ ಗುಡಲೂರಿನಿಂದ ಆಗಮಿಸಿದ ಯಾತ್ರೆಯನ್ನು ಶುಕ್ರವಾರದಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ.
‘ಭಾರತ್ ಜೋಡೋ’ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗುಂಡ್ಲುಪೇಟೆ ತಾಲೂಕಿನ ಕಳಲೆ ಗೇಟ್ ಬಳಿ ರಾಹುಲ್ ಗಾಂಧಿಯವರು ಸಾಹಿತಿಗಳು ಹಾಗೂ ಕಲಾವಿದರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ 4:00 ಗಂಟೆಯಿಂದ ಮತ್ತೆ ಪಾದಯಾತ್ರೆ ಮುಂದುವರೆಯಲಿದೆ.
ಮೊದಲ ದಿನದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹೆಜ್ಜೆ ಹಾಕಿದ್ದಾರೆ. ಇದರ ಮಧ್ಯೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬರಿಗಾಲಿನಲ್ಲೇ ನಡೆದಿದ್ದಾರೆ. ಪ್ರತಿ ನವರಾತ್ರಿ ಸಮಯದಲ್ಲಿ ಅವರು ಬರಿಗಾಲಿನಲ್ಲಿ ನಡೆಯುವ ಪದ್ಧತಿ ಆಚರಿಸಿಕೊಂಡು ಬಂದಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಚಪ್ಪಲಿ ಧರಿಸದೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು ಸಚಿವ ಡಾ. ಸುಧಾಕರ್ ಅವರನ್ನು ಭೇಟಿಯಾಗುವ ಮೂಲಕ ಬಿಜೆಪಿ ಸೇರ್ಪಡೆಯಾಗಬಹುದೆಂದು ಹೇಳಲಾಗುತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಸಹ ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಪಕ್ಷ ತೊರೆಯುವ ವದಂತಿಗೆ ತೆರೆ ಎಳೆದಿದ್ದಾರೆ.