
ಭಾರತದ ಫಿನ್ ಟೆಕ್ ಸಂಸ್ಥೆ ಭಾರತ್‌ಪೇ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಡೈರೆಕ್ಟರ್ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಭಾರತ್‌ಪೇ ಕಂಪನಿಯ ಸಹ ಸಂಸ್ಥಾಪಕ ಗ್ರೋವರ್ ವಿರುದ್ಧ, ಸಂಸ್ಥೆಯ ಇತರ ಸದಸ್ಯ ಮಂಡಳಿಯು ಹಣ ದುರುಪಯೋಗದ ಆರೋಪ ಹೊರಿಸಿ ತನಿಖೆ ಜಾರಿಗೊಳಿಸಿದೆ.
ಇದನ್ನು ತಡೆಯಲು ಗ್ರೋವರ್, ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (SIAC) ಬಳಿ ಮನವಿ ಮಾಡಿದ್ದರು. ಆದರೆ ಎಸ್ಐಎಸಿ ಅವರ ಮನವಿಯನ್ನು ತಿರಸ್ಕರಿಸಿದೆ, ಅದಾದ ಒಂದು ದಿನದ ನಂತರ ಗ್ರೋವರ್ ರಾಜೀನಾಮೆ ನೀಡಿದ್ದಾರೆ.
ಕಳೆದ ವಾರ, ಗ್ರೋವರ್ ಅವರ ಪತ್ನಿ ಮತ್ತು ಕಂಟ್ರೋಲ್ಸ್ನ ಮುಖ್ಯಸ್ಥೆಯಾಗಿದ್ದ ಮಾಧುರಿ ಜೈನ್ ಅವರನ್ನು ಕಂಪನಿಯು, ಹಣದ ದುರುಪಯೋಗ ಹಾಗೂ ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಹುದ್ದೆಯಿಂದ ತೆಗೆಯಲಾಗಿತ್ತು.
ಹೊತ್ತಿ ಉರಿದ ಟ್ರಕ್, ವಾಹನದಿಂದ ಹೊರ ಬರಲಾಗದೆ ಸುಟ್ಟು ಕರಕಲಾದ ಚಾಲಕ
ತಾವೇ ಬೆಳೆಸಿದ, ತಮ್ಮ ಕನಸಿನ ಸಂಸ್ಥೆಗೆ ರಾಜೀನಾಮೆ ನೀಡಿರುವ ಅಶ್ನೀರ್ ಗ್ರೋವರ್, ಮಂಡಳಿಗೆ ಕಟುವಾದ ಶಬ್ದಗಳಲ್ಲಿ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ನನ್ನನ್ನು ಸಂಸ್ಥೆಯ ಕೆಲವು ವ್ಯಕ್ತಿಗಳು ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಅತ್ಯಂತ ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ, ಜೊತೆಗೆ ನಿಂದಿಸಲಾಗಿದೆ ಎಂದು ಗ್ರೋವರ್ ಬರೆದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಅಶ್ನೀರ್ ಗ್ರೋವರ್, ನಾನೇ ಸ್ಥಾಪಿಸಿದ ಕಂಪೆನಿಗೆ ಬಲವಂತವಾಗಿ ರಾಜೀನಾಮೆ ಸಲ್ಲಿಸಿರುವಂತೆ ಮಾಡಿರುವುದಕ್ಕೆ ಭಾರವಾದ ಹೃದಯದಿಂದ ಇದನ್ನು ಬರೆಯುತ್ತಿದ್ದೇನೆ. ಫಿನ್ಟೆಕ್ ಜಗತ್ತಿನಲ್ಲಿ ಈ ಕಂಪೆನಿ ಇಂದು ನಾಯಕ ಸ್ಥಾನದಲ್ಲಿ ನಿಂತಿದೆ ಎಂಬುದನ್ನು ತಲೆ ಎತ್ತಿ ಹೇಳುತ್ತೇನೆ. 2022ರ ಆರಂಭದಿಂದಲೂ ದುರದೃಷ್ಟವಶಾತ್ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆಧಾರರಹಿತವಾಗಿ ಮತ್ತು ಗುರಿ ಮಾಡಿಕೊಂಡು ದಾಳಿ ನಡೆಯುತ್ತಿದೆ. ಕೆಲವು ವ್ಯಕ್ತಿಗಳು ನನ್ನ ವರ್ಚಸ್ಸಿಗೆ ಮಾತ್ರ ಹಾನಿ ಮಾಡುವುದಲ್ಲದೆ ಕಂಪೆನಿಯ ವರ್ಚಸ್ಸಿಗೂ ಘಾಸಿ ಮಾಡಲು ಸಿದ್ಧರಾಗಿದ್ದಾರೆ. ಆದರೆ ಮೇಲ್ನೋಟಕ್ಕೆ ಅದನ್ನು ರಕ್ಷಿಸುವಂತೆ ಕಾಣಿಸುತ್ತಿದ್ದಾರೆ, ಎಂದಿದ್ದಾರೆ.