ದುರ್ಬಲ ಜಾಗತಿಕ ಸೂಚನೆಗಳ ನಡುವೆಯೇ ಭಾರತೀಯ ಮಾರುಕಟ್ಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 861 ಅಂಕಗಳ ಕುಸಿತದೊಂದಿಗೆ 57,972ಕ್ಕೆ ಬಂದು ತಲುಪಿದೆ. ನಿಫ್ಟಿ 246 ಅಂಕ ಇಳಿಕೆಯಾಗಿ 17,312ಕ್ಕೆ ತಲುಪಿದೆ. ವಹಿವಾಟಿನಲ್ಲಿ ಭಾರೀ ಏರಿಳಿತವಿದ್ದಿದ್ದರಿಂದ ಹೆಚ್ಚಿನ ಲಾಭಗಳೇನೂ ದಾಖಲಾಗಿಲ್ಲ.
ಶುಕ್ರವಾರ ಮಾರುಕಟ್ಟೆ ಸುಸ್ಥಿತಿಯಲ್ಲಿತ್ತು. ಸೆನ್ಸೆಕ್ಸ್ 59.15 ಪಾಯಿಂಟ್ ಅಥವಾ ಶೇ.0.10 ರಷ್ಟು ಏರಿಕೆಯಾಗಿ 58,833.87 ಕ್ಕೆ ಕೊನೆಗೊಂಡಿತ್ತು. ನಿಫ್ಟಿ 36.45 ಪಾಯಿಂಟ್ ಅಂದರೆ ಶೇ.0.21 ರಷ್ಟು ಏರಿಕೆಯಾಗಿ 17,558.90 ಕ್ಕೆ ಕೊನೆಗೊಂಡಿತ್ತು.
RIL ಷೇರುಗಳು ತಟಸ್ಥ…
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು 45 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಿದೆ. ಈ ಬೆಳವಣಿಗಯ ನಡುವೆಯೂ ಆರ್‌ಐಎಲ್ ಷೇರುಗಳು ಜಿಗಿತ ಕಂಡಿಲ್ಲ, ದಿನದ ವಹಿವಾಟು ಅಂತ್ಯಕ್ಕೆ ಷೇರುಗಳ ಮೌಲ್ಯ ತಟಸ್ಥವಾಗಿಯೇ ಇತ್ತು. ಸಭೆ ಪ್ರಾರಂಭವಾಗಿ ಒಂದು ಗಂಟೆಯ ಬಳಿಕ ಷೇರು ಮಾರುಕಟ್ಟೆಯಲ್ಲಿ RIL ಸ್ಟಾಕ್ ಶೇ.0.81 ರಷ್ಟು ಕಡಿಮೆಯಾಗಿ 2,597.55 ರೂಪಾಯಿಗೆ ಬಂದು ತಲುಪಿತು. ಹಿಂದಿನ ದಿನದ ವಹಿವಾಟಿನಲ್ಲಿ ಷೇರುಗಳ ಮೌಲ್ಯ 2,618.75 ರೂಪಾಯಿ ಇತ್ತು. ನಂತರ, ಆರ್‌ಐಎಲ್ ಷೇರುಗಳು ಬಿಎಸ್‌ಇಯಲ್ಲಿ 18.75 ರೂಪಾಯಿ ಕಡಿಮೆಯಾಗಿ 2,600 ರೂಪಾಯಿಗೆ ಬಂದು ತಲುಪಿದ್ದವು.
ಆದಾಗ್ಯೂ, RIL ಷೇರುಗಳು 20-ದಿನ, 50-ದಿನ, 100-ದಿನ ಮತ್ತು 200-ದಿನದ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸಿವೆ. ಆದ್ರೆ 5-ದಿನದ ಮೂವಿಂಗ್ ಸರಾಸರಿಗಿಂತ ಕಡಿಮೆಯಾಗಿವೆ. RIL ಷೇರು ಒಂದು ವರ್ಷದಲ್ಲಿ ಶೇ.16.88ರಷ್ಟು ಏರಿಕೆ ಕಂಡಿದೆ. ಈ ವರ್ಷದ ಆರಂಭದಿಂದ ಶೇ.10ರಷ್ಟು ಏರಿಕೆಯಾಗಿದೆ. ಸಂಸ್ಥೆಯ ಒಟ್ಟು 4.59 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ 120.20 ಕೋಟಿ ರೂಪಾಯಿ ವಹಿವಾಟು ನಡೆಸಿವೆ.