ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಚೀನಾ ಗಂಡಾಂತರ ತರುತ್ತಿರುವ ಹಿನ್ನೆಲೆಯಲ್ಲಿ ಭಾರತವು ಖಡಕ್ ತಿರುಗೇಟು ನೀಡಿದ್ದು, ಚೀನಿಯರ ಪ್ರವಾಸಿ ವೀಸಾಕ್ಕೆ ಕತ್ತರಿ ಹಾಕಿದೆ. ಏಪ್ರಿಲ್ 20ರಂದು ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ಚೀನಾದ ಪ್ರವಾಸಿಗರಿಗೆ ನೀಡಲಾಗಿರುವ ಪ್ರವಾಸಿ ವೀಸಾಗಳು ಅಸಿಂಧು ಎಂದು ತಿಳಿಸಲಾಗಿದೆ.
ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ 22 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೊರೊನಾ ಸೋಂಕಿನ ಹಿನ್ನಲೆಯಲ್ಲಿ 2020ರಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ಆದರೆ ಆ ಬಳಿಕ ಭೌತಿಕ ತರಗತಿಗಳಿಗೆ ಹಾಜರಾಗಲು ಚೀನಾ ಸರ್ಕಾರ ವೀಸಾ ನೀಡಲು ಮೀನಾಮೇಷ ಎಣಿಸುತ್ತಿದೆ. ಇದರಿಂದಾಗಿ ಆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಭಾರತ ಸರ್ಕಾರ ಈ ಕುರಿತು ಹಲವು ಬಾರಿ ಚೀನಾ ಜೊತೆ ಮಾತುಕತೆ ನಡೆಸಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ಈ ಹಿನ್ನೆಲೆಯಲ್ಲಿ ತಿರುಗೇಟು ನೀಡಲು ಮುಂದಾದ ಭಾರತ, ಚೀನಾ ನಾಗರಿಕರಿಗೆ ನೀಡಲಾಗಿದ್ದ ಪ್ರವಾಸಿ ವೀಸಾಗಳನ್ನು ಅಮಾನತು ಮಾಡಿದೆ. ಈಗಾಗಲೇ ಈ ಕುರಿತು ವಿಮಾನಯಾನ ಸಂಸ್ಥೆಗಳ ಸಂಘ ಐಎಟಿಎ ತನ್ನೆಲ್ಲ ಸದಸ್ಯರಿಗೆ ಮಾಹಿತಿಯನ್ನು ರವಾನಿಸಿದೆ. ಹತ್ತು ವರ್ಷ ಅವಧಿಯ ಪ್ರವಾಸಿ ವೀಸಾ ಇನ್ನು ಮುಂದೆ ಸಿಂಧುವಲ್ಲ ಎಂದು ತಿಳಿಸಲಾಗಿದೆ.