ಪ್ರತಿ 5 ವರ್ಷಗಳಿಗೊಮ್ಮೆ ನಾವು ಮತದಾನದ ಮೂಲಕ ಸಂಸದರನ್ನು ಆಯ್ಕೆ ಮಾಡುತ್ತೇವೆ. ನಂತರ ಅವರು ಲೋಕಸಭೆಯಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಕೂಡ ಸಂಸದರ ಆದ್ಯ ಕರ್ತವ್ಯ. ಇದಕ್ಕಾಗಿ ಸಂಸದರು ಪ್ರತಿ ತಿಂಗಳು ಎಷ್ಟು ಸಂಬಳ ಪಡೆಯುತ್ತಾರೆ? ಯಾವ್ಯಾವ ಭತ್ಯೆ ಅವರಿಗೆ ಸಿಗುತ್ತಿದೆ ಅನ್ನೋದು ಗೊತ್ತಾ?
ಭಾರತದಲ್ಲಿ ಪ್ರತಿಯೊಬ್ಬ ಸಂಸದ ಪ್ರತಿ ತಿಂಗಳು ಮೂಲ ವೇತನವಾಗಿ 1 ಲಕ್ಷ ರೂಪಾಯಿ ಪಡೆಯುತ್ತಾರೆ. ಇದಲ್ಲದೇ ಅವರಿಗೆ ಕಚೇರಿ ಭತ್ಯೆಯಾಗಿ 54 ಸಾವಿರ ಹಾಗೂ ಕ್ಷೇತ್ರ ಭತ್ಯೆಯಾಗಿ 49 ಸಾವಿರ ರೂಪಾಯಿ ಬರುತ್ತದೆ. ಒಟ್ಟಾರೆ ಪ್ರತಿ ತಿಂಗಳು ಸಂಸದರಿಗೆ ನಿಗದಿತ ವೇತನವಾಗಿ ಸುಮಾರು 2 ಲಕ್ಷ ರೂಪಾಯಿ ದೊರೆಯುತ್ತದೆ.
ಸಂಬಳದ ಹೊರತಾಗಿ ಸಂಸದರು ಪಡೆಯುವ ಭತ್ಯೆಗಳು
ಸಂಸದರಿಗೆ ನೇರ ಬಾಕಿಯಾಗಿ ವಾರ್ಷಿಕ 3 ಲಕ್ಷ 80 ಸಾವಿರ ರೂಪಾಯಿ ನೀಡಲಾಗುತ್ತದೆ. ವಿಮಾನ ಪ್ರಯಾಣ ಭತ್ಯೆಯಾಗಿ ವಾರ್ಷಿಕ 4 ಲಕ್ಷ 8 ಸಾವಿರ ರೂ. ರೈಲು ಪ್ರಯಾಣ ಭತ್ಯೆ ವಾರ್ಷಿಕ 5 ಸಾವಿರ ರೂಪಾಯಿ, ನೀರಿನ ಭತ್ಯೆ ವಾರ್ಷಿಕ 4 ಸಾವಿರ ರೂಪಾಯಿ, ವಿದ್ಯುತ್ ಭತ್ಯೆ ವಾರ್ಷಿಕ 4 ಲಕ್ಷ ರೂಪಾಯಿ ಸಂಸದರಿಗೆ ಲಭ್ಯವಿರುತ್ತದೆ. ಪ್ರತಿ ತಿಂಗಳು ಸಂಸದರು ಕೈತುಂಬಾ ಹಣ ಪಡೆಯುತ್ತಾರೆ. ಸಂಸದರ ನಿಗದಿತ ವೇತನ ಮತ್ತು ಇತರೆ ಭತ್ಯೆಗಳನ್ನು ಸೇರಿಸಿದರೆ ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತ ನೀಡಲಾಗುತ್ತದೆ. ಪ್ರತಿ ಸಂಸದರ ವಾರ್ಷಿಕ ವೆಚ್ಚವೇ 36 ಲಕ್ಷ ರೂಪಾಯಿ.
ಸಂಬಳದ ಮೇಲೆ ತೆರಿಗೆ ಇಲ್ಲ !
ವಿಶೇಷವೆಂದರೆ ಸಂಸದರ ಸಂಬಳಕ್ಕೆ ತೆರಿಗೆ ಇಲ್ಲ. ಇದಲ್ಲದೇ ವಾಸಕ್ಕೆ ಸರಕಾರಿ ಬಂಗಲೆಯೂ ಲಭ್ಯವಿದೆ. ಬಂಗಲೆಯ ಪೀಠೋಪಕರಣಗಳು, ಎಸಿ ಮತ್ತು ನಿರ್ವಹಣೆಗೆ ಅವರು ಹಣ ಪಾವತಿಸಬೇಕಾಗಿಲ್ಲ. ಹೀಗೆ ಸರ್ಕಾರದಿಂದ ಸಕಲ ಸೌಲಭ್ಯ ಪಡೆದರೂ ಕೆಲ ಸಂಸದರು ಜನಪರ ಕೆಲಸಗಳನ್ನು ಮಾಡದೇ ಇರುವುದು ದುರಂತವೇ ಸರಿ.