ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಂತೂ ಆಘಾತಕಾರಿಯಾಗಿವೆ. ಈ ಡೇಟಾದ ಪ್ರಕಾರ 2020 ಮತ್ತು 2021ರಲ್ಲಿ ರಾಜಸ್ಥಾನದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಲ್ಲಿ 2020ರಲ್ಲಿ 2,339 ಅತ್ಯಾಚಾರ ಕೇಸ್‌ಗಳು ವರದಿಯಾಗಿವೆ. 2021ರಲ್ಲಿ ಈ ಅಪರಾಧಗಳ ಸಂಖ್ಯೆ 2,947ಕ್ಕೆ ಏರಿಕೆಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಅತಿ ಹೆಚ್ಚು ಬಲಾತ್ಕಾರ ಪ್ರಕರಣಗಳು ನಡೆದಿವೆ.
ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ 2021ರಲ್ಲಿ ರಾಜಸ್ಥಾನದಲ್ಲಿ 6,337 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲ ಅನ್ನೋದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ. ಉತ್ತರ ಪ್ರದೇಶದಲ್ಲಿ 2,845, ಮಹಾರಾಷ್ಟ್ರದಲ್ಲಿ 2,496 ಅತ್ಯಾಚಾರ ಪ್ರಕರಣಗಳು ನಡೆದಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2021 ರಲ್ಲಿ 1,250 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, 2020ರಲ್ಲಿ 997 ಕೇಸ್‌ಗಳು ದಾಖಲಾಗಿದ್ದವು.
2020ರಲ್ಲಿ ರಾಜಸ್ಥಾನದಲ್ಲಿ 5,310, ಉತ್ತರ ಪ್ರದೇಶದಲ್ಲಿ 2,769, ಮಧ್ಯಪ್ರದೇಶದಲ್ಲಿ 2,339, ಮಹಾರಾಷ್ಟ್ರದಲ್ಲಿ 2,061 ಮತ್ತು ಅಸ್ಸಾಂನಲ್ಲಿ 1,657 ಅತ್ಯಾಚಾರ ಪ್ರಕರಣಗಳು ನಡೆದಿವೆ. ಕೋವಿಡ್ ಹಿನ್ನೆಲೆಯಲ್ಲಿ ಎನ್‌ಸಿಆರ್‌ಬಿ ಕಳೆದ ಎರಡು ವರ್ಷಗಳಿಂದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರಲಿಲ್ಲ. ಈಗ ಒಟ್ಟಾರೆ ಡೇಟಾವನ್ನು ಪ್ರಕಟಿಸಿದೆ.